ಬೆಂಗಳೂರು: ರಾಜ್ಯದ ನಾಲ್ಕು ಸ್ಥಳಗಳಲ್ಲಿ ಮೇ 9ರಿಂದ 12ರವರೆಗೆ ನಾಗರಿಕರ ಸ್ವರಕ್ಷಣೆ ತಾಲೀಮು ನಡೆಸಲು ನಿರ್ಧರಿಸಲಾಗಿದೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಮೂಲಗಳು ತಿಳಿಸಿವೆ.
ಮೇ 9ರಂದು ರಾಯಚೂರು, 10ರಂದು ಮೈಸೂರು, 11ರಂದು ಮಂಡ್ಯ ಹಾಗೂ 12ರಂದು ಕಾರವಾರದಲ್ಲಿ ಸ್ವರಕ್ಷಣೆ ತಾಲೀಮು ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಬುಧವಾರ ಸ್ವರಕ್ಷಣೆಯ ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ತಾಲೀಮು ಯಶಸ್ವಿಗೊಂಡಿತ್ತು. ನೂರಾರು ಸಾರ್ವಜನಿಕರು ಕಾರ್ಯಾಚರಣೆ ವೀಕ್ಷಣೆ ಮಾಡಿದ್ದರು ಎಂದೂ ಅವರು ತಿಳಿಸಿದರು.
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಘರ್ಷ ಮುಂದುವರೆದಿದ್ದು, ಬೇರೆ ಬೇರೆ ಸ್ಥಳಗಳ ಮೇಲೆ ವಾಯು ದಾಳಿ ನಡೆದರೆ ಸ್ವರಕ್ಷಣೆ ಮಾಡಿಕೊಳ್ಳುವುದು ಹೇಗೆಂದು ನಾಗರಿಕರಿಗೆ ತಿಳಿಸಲಾಗುತ್ತಿದೆ. ಇನ್ನೂ ನಾಲ್ಕು ಕಡೆ ತಾಲೀಮು ನಡೆಯಲಿದೆ. ಸದ್ಯ ನಿರ್ಧಾರ ಮಾಡಿರುವ ದಿನದಂದೇ ತಾಲೀಮು ನಡೆಯುವ ಸಾಧ್ಯತೆ ಇದೆ. ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಗೃಹರಕ್ಷದಳ, ಎನ್‌ಸಿಸಿ, ಎನ್‌ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೆಡ್‌ಕ್ರಾಸ್, ಪೊಲೀಸ್ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.