ಪೀಣ್ಯ ದಾಸರಹಳ್ಳಿ: 'ಆಡಳಿತ ಸುಧಾರಾಣ ಸಮಿತಿ ಅಧ್ಯಕ್ಷರಾಗಿ ಕೆಂಗಲ್ ಹನುಮಂತಯ್ಯ ಅವರು ಸಲ್ಲಿಸಿದ್ದ ವರದಿಯಲ್ಲಿ ಶೇ 75ರಷ್ಟು ಅನುಷ್ಠಾನವಾಗಿದ್ದು, ಇದು ಅವರ ದೂರದೃಷ್ಟಿ ಮತ್ತು ಆಡಳಿತ ವೈಖರಿಗೆ ಸಾಕ್ಷಿಯಾಗಿದೆ’ ಎಂದು ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ತಿಳಿಸಿದರು.
ಸುಂಕದಕಟ್ಟೆಯ ವಿದ್ಯಾನಿಕೇತನ ಶಾಲೆಯಲ್ಲಿ ಹಸಿರು ಪ್ರತಿಷ್ಠಾನವು ಅಯೋಜಿಸಿದ್ದ ಕೆಂಗಲ್ ಹನುಮಂತಯ್ಯನವರ ಜನ್ಮದಿಚಾರಣೆ ಉದ್ಘಾಟಿಸಿ ಮಾತನಾಡಿದರು.
‘ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದವರು ಕೆಂಗಲ್ ಹನುಮಂತಯ್ಯನವರು, ಅಷ್ಟೇ ಅಲ್ಲ ಶಾಸಕಾಂಗ ಸಭೆಯ ವಿರೋಧದ ನಡುವೆಯೂ ಮದ್ಯಪಾನ ನಿಷೇಧ ಜಾರಿ ಮಾಡಿದ ಮೊದಲ ಮತ್ತು ಕೊನೆಯ ಮುಖ್ಯಮಂತ್ರಿಯೂ ಹೌದು’ ಎಂದು ಬಣ್ಣಿಸಿದರು.
ಹಸಿರು ಪ್ರತಿಷ್ಠಾನ ಅಧ್ಯಕ್ಷ ಕೆ.ಜಿ.ಕುಮಾರ್ ಮಾತನಾಡಿ, 'ಕೆಂಗಲ್ ಅವರು ವಿಧಾನಸೌಧ ನಿರ್ಮಾತೃ ಅಷ್ಟೇ ಅಲ್ಲದೇ, ಬೆಂಗಳೂರು ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದು’ ಎಂದರು
‘ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು. ಆಧುನಿಕ ಬೆಂಗಳೂರು ನಿರ್ಮಾತೃ ಕೆಂಗಲ್ ಹನುಮಂತಯ್ಯ. ಅಂತಹ ಮಹನೀಯರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ’ ಎಂದು ತಿಳಿಸಿದರು.
ಸಮನ್ವಯ ಪ್ರತಿಷ್ಠಾನ ಅಧ್ಯಕ್ಷ ಗೋವಿಂದರಾಜು ಪಟೇಲ್, ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಧನಂಜಯ್, ರಾಜೀವ್ ಗಾಂಧಿ ಶಾಲೆಯ ಕಾರ್ಯದರ್ಶಿ ಯುವರಾಜ್, ಶಿಕ್ಷಕ ಶ್ರೀನಿವಾಸ್, ಕಮಲ, ನಾಗರತ್ನ, ಜನಪರ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.