ADVERTISEMENT

ಹಾಜರಾತಿಯಲ್ಲಿ ಮೋಹನ್‌, ಪ್ರಶ್ನೆಯಲ್ಲಿ ತೇಜಸ್ವಿಸೂರ್ಯ ನಂ.1

ಸಂಸದರು, ಶಾಸಕರ ಬಗ್ಗೆ ಸಿವಿಕ್‌ನಿಂದ ‘ನಮ್ಮ ನೇತಾ ನಮ್ಮ ರಿವ್ಯೂ’ ಕಾರ್ಡ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 19:18 IST
Last Updated 14 ಜೂನ್ 2025, 19:18 IST
ತೇಜಸ್ವಿಸೂರ್ಯ
ತೇಜಸ್ವಿಸೂರ್ಯ   

ಬೆಂಗಳೂರು: ನಗರದಿಂದ ಆಯ್ಕೆಯಾಗಿರುವ ನಾಲ್ವರು ಸಂಸದರ ಒಂದು ವರ್ಷದ ಸಾಧನೆ, 32 ಶಾಸಕರ ಎರಡು ವರ್ಷದ ಸಾಧನೆ ಏನು ಎಂಬುದರ ಬಗ್ಗೆ ‘ಸಿವಿಕ್‌’ ಸಂಸ್ಥೆಯು ನಾಗರಿಕ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಸಂಸತ್‌ ಅಧಿವೇಶನದಲ್ಲಿ ಭಾಗವಹಿಸುವುದರಲ್ಲಿ ಪಿ.ಸಿ. ಮೋಹನ್‌ ಮೊದಲ ಸ್ಥಾನದಲ್ಲಿದ್ದರೆ, ಪ್ರಶ್ನೆ ಕೇಳುವುದರಲ್ಲಿ ತೇಜಸ್ವಿ ಸೂರ್ಯ ಮೊದಲ ಸ್ಥಾನ ಪಡೆದಿದ್ದಾರೆ. ಸಂಸದರ ನಿಧಿ ಬಳಕೆಯಲ್ಲಿ ಡಾ. ಸಿ.ಎನ್‌. ಮಂಜುನಾಥ್‌ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಕಲಾಪದಲ್ಲಿ ಸಂಸದ ಪಿ.ಸಿ. ಮೋಹನ್‌ ಅವರು ಶೇ 98.51, ಸಿ.ಎನ್.ಮಂಜುನಾಥ್‌ ಶೇ 94ರಷ್ಟು ಭಾಗವಹಿಸಿದ್ದಾರೆ. ರಾಷ್ಟ್ರೀಯ ಸರಾಸರಿಯು ಶೇ 87 ಆಗಿದ್ದು, ತೇಜಸ್ವಿ ಸೂರ್ಯ ಶೇ 77.6ರಷ್ಟು ಹಾಜರಾತಿ ಹೊಂದಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ ಅವರ ಹಾಜರಾತಿ ವಿವರಗಳನ್ನು ವರದಿಯಲ್ಲಿ ನೀಡಿಲ್ಲ.

ADVERTISEMENT

ತೇಜಸ್ವಿ ಸೂರ್ಯ 84 ಪ್ರಶ್ನೆಗಳನ್ನು ಕೇಳಿದ್ದರೆ, ಸಿ.ಎನ್‌. ಮಂಜುನಾಥ್ 9, ಪಿ.ಸಿ. ಮೋಹನ್‌ 1 ಪ್ರಶ್ನೆ ಮಾತ್ರ ಕೇಳಿದ್ದಾರೆ. ಮಂಜುನಾಥ್‌ ಶೇ 126.64, ತೇಜಸ್ವಿ ಸೂರ್ಯ ಶೇ 116, ಶೋಭಾ ಕರಂದ್ಲಾಜೆ ಶೇ 97.6ರಷ್ಟು ಸಂಸದರ ನಿಧಿ ಬಳಕೆ ಮಾಡಿದ್ದರೆ, ಪಿ.ಸಿ. ಮೋಹನ್‌ ಶೇ 9.48ರಷ್ಟು ಮಾತ್ರ ಬಳಕೆ ಮಾಡಿ ಕೊನೇ ಸ್ಥಾನದಲ್ಲಿದ್ದಾರೆ.

ಬೆಂಗಳೂರಿನ ಶಾಸಕರಿಗೆ ಸಂಬಂಧಿಸಿದಂತೆ ಸಾಧನೆ ನೋಡಿದರೆ ಶಾಸಕರ ನಿಧಿಯನ್ನು ಬಳಸುವಲ್ಲಿ  ನಿರ್ಲಕ್ಷ್ಯ ಕಂಡು ಬಂದಿದೆ. ನಾಲ್ವರು ಶಾಸಕರು ಮಾತ್ರ ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಆರು ಶಾಸಕರು ಶೇ 90ಕ್ಕಿಂತ ಅಧಿಕ ನಿಧಿ ಬಳಕೆ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಧಾನಸಭಾ ಕಲಾಪದಲ್ಲಿ ನೆಲಮಂಗಲದ ಎನ್. ಶ್ರೀನಿವಾಸ ಅವರು ಶೇ 100ರಷ್ಟು ಹಾಜರಾತಿ ಹೊಂದಿದ್ದಾರೆ. ಮೂವರು ಶಾಸಕರು ಶೇ 70ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ. ಶೇ 53.62ರಷ್ಟು ಹಾಜರಾತಿ ಹೊಂದಿರುವ ಪ್ರಿಯಕೃಷ್ಣ ಕೊನೆಯ ಸ್ಥಾನದಲ್ಲಿದ್ದಾರೆ.

ಬಹುತೇಕ ಶಾಸಕರ ಆದಾಯ ಹೆಚ್ಚಳವಾಗಿದೆ. ಕೆ.ಗೋಪಾಲಯ್ಯ (ಶೇ 1,3399) ಮತ್ತು ಮುನಿರತ್ನ (ಶೇ 959) ಆದಾಯ ವಿಪರೀತ ಏರಿಕೆಯಾಗಿದೆ. ಎನ್.ಎ. ಹ್ಯಾರಿಸ್ (ಶೇ 318) ಮತ್ತು ಆರ್.ಅಶೋಕ್ (ಶೇ 104) ಆನಂತರದ ಸ್ಥಾನ ಹೊಂದಿದ್ದಾರೆ.

ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ಸಿವಿಕ್‌ ಬೆಂಗಳೂರು ಸಂಸ್ಥೆಯ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌, ಸದಸ್ಯ ಎ.ಕೃಷ್ಣ ಪ್ರಶಾಂತ್‌ ಉಪಸ್ಥಿತರಿದ್ದರು. ನಗರದ ವಿವಿಧ ಸಮಸ್ಯೆಗಳನ್ನು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಿಡಿಸಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.