ADVERTISEMENT

ಮಂಗನ ಕಾಯಿಲೆ ಗಣನೀಯ ಇಳಿಮುಖ

ಹೈಕೋರ್ಟ್‌ಗೆ ಸರ್ಕಾರದ ಪ್ರಮಾಣ ಪತ್ರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:59 IST
Last Updated 26 ಏಪ್ರಿಲ್ 2019, 20:59 IST

ಬೆಂಗಳೂರು: ‘ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಪ್ರದೇಶದ ವಿವಿಧೆಡೆ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಗಣನೀಯವಾಗಿ ಇಳಿಮುಖವಾಗಿದೆ’ ಎಂದು ಶಿವಮೊಗ್ಗ ಜಿಲ್ಲಾ ವೈರಾಣು ರೋಗಲಕ್ಷಣ ಪತ್ತೆ ಪ್ರಯೋಗಾಲಯದ ಉಪ ನಿರ್ದೇಶಕರು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

‘ಮಂಗನ ಕಾಯಿಲೆ’ ನಿಯಂತ್ರಣ ಹಾಗೂ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲರಾದ ಶಿವಮೊಗ್ಗದ ಕೆ.ಪಿ. ಶ್ರೀಪಾಲ್ ಹಾಗೂ ಸೊರಬ ತಾಲ್ಲೂಕಿನ ಚಿಕ್ಕಚೌಟಿ ಗ್ರಾಮದ ಎನ್.ಜಿ. ರಮೇಶಪ್ಪ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಡಿ.ನಾಗರಾಜ್ ಅವರು, ಈ ಕುರಿತಂತೆ ಉಪ ನಿರ್ದೇಶಕ ಡಾ.ಎಸ್‌.ಕೆ.ಕಿರಣ್‌ ಅವರು ಸಲ್ಲಿಸಿರುವ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ನೀಡಿದರು.

ADVERTISEMENT

‍ಪ್ರಮಾಣ ಪತ್ರದಲ್ಲೇನಿದೆ?: ‘ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಶೇ 22.75ರಷ್ಟು ಪ್ರಮಾಣದಲ್ಲಿ ಕಾಯಿಲೆ ಮಾರ್ಚ್‌ ವೇಳೆಗೆ ಶೇ 5.84ಕ್ಕೆ ಇಳಿಮುಖವಾಗುವ ಮೂಲಕ ನಿಯಂತ್ರಣಕ್ಕೆ ಬಂದಿದೆ’ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಲಾಗಿದೆ.

‘ಶಿವಮೊಗ್ಗ, ಮಣಿಪಾಲ ವೈರಾಣು ಪತ್ತೆ ಪ್ರಯೋಗಾಯ ಹಾಗೂ ಬೆಂಗಳೂರಿನ ವೈರಾಣು ರೋಗ ಪತ್ತೆಯ ರಾಷ್ಟ್ರೀಯ ಸಂಸ್ಥೆಯು ಈತನಕ 353 ಪ್ರಕರಣಗಳನ್ನು ದೃಢೀಕರಿಸಿದೆ’ ಎಂದು ತಿಳಿಸಲಾಗಿದೆ.

‘ರೋಗದ ಪ್ರಮಾಣ 2019ರ ಜನವರಿಯಲ್ಲಿ ಶೇ 8.55ರಷ್ಟು ಹಾಗೂ ಫೆಬ್ರುವರಿಯಲ್ಲಿ 7.09ರಷ್ಟಿತ್ತು. ಫೆಬ್ರುವರಿಯಲ್ಲಿ ತೀರ್ಥಹಳ್ಳಿಯ ತೋಟದಕೊಪ್ಪ ಗ್ರಾಮದ ಲಾಚು ಪೂಜಾರಿ ಮತ್ತು ಮಾರ್ಚ್‌ನಲ್ಲಿ ಸಾಗರ ತಾಲ್ಲೂಕಿನ ಅಲಗೋಡು ಗ್ರಾಮದ ಪೂರ್ಣಿಮಾ ಹಾಗೂ ಲಿಂಗನಮಕ್ಕಿಯ ಮಂಜಪ್ಪ ಕಾರ್ಗಲ್‌ ಕಾಯಿಲೆಯಿಂದ ಅಸುನೀಗಿದ್ದಾರೆ’ ಎಂದು ಮಾಹಿತಿ ನೀಡಲಾಗಿದೆ.

‘ಕಾಯಿಲೆ ಪೀಡಿತ ಪ್ರದೇಶಗಳಲ್ಲಿ 1,40,000 ಡೋಸುಗಳಷ್ಟು ಸೋಂಕು ರಕ್ಷಣೆ ಲಸಿಕೆ ವಿತರಿಸಲಾಗಿದೆ. ಸೋಂಕು ಕಾಣಿಸಿಕೊಂಡ ಜಿಲ್ಲೆಗಳಲ್ಲಿ ಸ್ಥಳೀಯ ಜಿಲ್ಲಾಡಳಿತಗಳು ತಡಮಾಡದೆ ಯುದ್ಧೋಪಾದಿಯಲ್ಲಿ ನಿಯಂತ್ರಣ ಕ್ರಮ ಕೈಗೊಂಡಿವೆ’ ಎಂದು ವಿವರಿಸಲಾಗಿದೆ.

ಅರ್ಜಿದಾರರು ಈ ಪ್ರಮಾಣ ಪತ್ರಕ್ಕೆ ಪ್ರತಿ ಉತ್ತರ ಸಲ್ಲಿಸುವುದಾಗಿ ತಿಳಿಸಿದ ಕಾರಣ, ವಿಚಾರಣೆಯನ್ನು ಬೇಸಿಗೆ ರಜೆಯ ನಂತರ ಕೈಗೆತ್ತಿ
ಕೊಳ್ಳುವುದಾಗಿ ನ್ಯಾಯಪೀಠ ಹೇಳಿದೆ.

ಕೋರಿಕೆ ಏನು?: ಮಂಗನ ಕಾಯಿಲೆ ಬಾಧಿತ ಜಿಲ್ಲೆಗಳಲ್ಲಿ ನಿರೋಧಕ ಲಸಿಕೆ ಹಾಗೂ ಔಷಧಿಗಳನ್ನು ಪೂರೈಸಲು ಮತ್ತು ಅಗತ್ಯ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲು ಆರೋಗ್ಯ ಇಲಾಖೆಗೆ ನಿರ್ದೇಶಿಸಬೇಕು. ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ವರೆಗೆ ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿ ಸತ್ತು ಹೋದ ಮಂಗಗಳನ್ನು ಪತ್ತೆ ಹಚ್ಚಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇದಕ್ಕಾಗಿ ತಜ್ಞರ ತಂಡ ರಚಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶಿಸಬೇಕು’ ಎಂಬ ಅಂಶಗಳು ಅರ್ಜಿದಾರರ ಪ್ರಮುಖ ಕೋರಿಕೆಯಾಗಿವೆ.

‘ಕ್ಯಾಸನೂರು ಫಾರೆಸ್ಟ್ ಡಿಸೀಸ್‌‘ (ಕೆಎಫ್‌ಡಿ) ಅಥವಾ ‘ಮಂಗನ ಕಾಯಿಲೆ’ ಎಂದು ಕರೆಯಲಾಗುವ ಇದು ಮೊದಲ ಬಾರಿಗೆ 1975ರಲ್ಲಿ ಸಾಗರ ಬಳಿಯ ಕ್ಯಾಸನೂರು ಗ್ರಾಮದಲ್ಲಿ ಪತ್ತೆಯಾಗಿತ್ತು.

‘ಸದ್ಯ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ ಮೈಸೂರು, ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.