ADVERTISEMENT

ನೈತಿಕ ಮೌಲ್ಯಗಳು ಅಧಃಪತನದತ್ತ ಸಾಗುತ್ತಿವೆ: ಸಂತೋಷ್‌ ಹೆಗ್ಡೆ

ವಿನಯ್ ಕುಮಾರ್, ಮಹೇಶ್ ಪೋತೆದಾರಗೆ ‘ಅಪ್ಪ ರಾಜ್ಯ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 15:03 IST
Last Updated 31 ಆಗಸ್ಟ್ 2025, 15:03 IST
ಕಾರ್ಯಕ್ರಮದಲ್ಲಿ ಮಹೇಶ್ ಪೋತೆದಾರ ಮತ್ತು ವಿನಯ್ ಕುಮಾರ್ ಜಿ.ಬಿ. ಅವರಿಗೆ ‘ಅಪ್ಪ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿ.ನಾಗೇಂದ್ರ ಪ್ರಸಾದ, ಶ್ರೀಶೈಲ್ ಎಸ್. ಮೇಟಿ, ಸಂತೋಷ್ ಹೆಗ್ಡೆ, ಉಮಾರಾಣಿ ಎಸ್., ವಿಜಯ್ ರಾಘವೇಂದ್ರ ಹಾಗೂ ಮೌಲಾಲಿ ಕೆ. ಅಲಗೂರ ಉಪಸ್ಥಿತರಿದ್ದರು 
ಕಾರ್ಯಕ್ರಮದಲ್ಲಿ ಮಹೇಶ್ ಪೋತೆದಾರ ಮತ್ತು ವಿನಯ್ ಕುಮಾರ್ ಜಿ.ಬಿ. ಅವರಿಗೆ ‘ಅಪ್ಪ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿ.ನಾಗೇಂದ್ರ ಪ್ರಸಾದ, ಶ್ರೀಶೈಲ್ ಎಸ್. ಮೇಟಿ, ಸಂತೋಷ್ ಹೆಗ್ಡೆ, ಉಮಾರಾಣಿ ಎಸ್., ವಿಜಯ್ ರಾಘವೇಂದ್ರ ಹಾಗೂ ಮೌಲಾಲಿ ಕೆ. ಅಲಗೂರ ಉಪಸ್ಥಿತರಿದ್ದರು    

ಬೆಂಗಳೂರು: ‘ಆಧುನಿಕ ಸಮಾಜದಲ್ಲಿ ನೈತಿಕ ಮೌಲ್ಯಗಳು ಅಧಃಪತನದತ್ತ ಸಾಗುತ್ತಿವೆ. ದುರಾಸೆಯೆಂಬುದು ಉದಾತ್ತ ಮೌಲ್ಯಗಳನ್ನು ಕಸಿದುಕೊಂಡಿದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು.

ನಬಿರೋಷನ್ ಪ್ರಕಾಶನ ನಗರದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕಲಾಸಂಗಮ ಕಾರ್ಯಕ್ರಮದಲ್ಲಿ ಇನ್‌ಸೈಟ್ಸ್ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ್ ಪೋತೆದಾರ ಅವರಿಗೆ ‘ಅಪ್ಪ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯನ್ನು ಖತಾಲಸಾಬ ಆಲಗೂರ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದು, ತಲಾ ₹ 5 ಸಾವಿರ ನಗದು ಒಳಗೊಂಡಿದೆ. 

‘ಸುಂದರ ಸಮಾಜವನ್ನು ಕಟ್ಟಲು ತೃಪ್ತಿ ಹಾಗೂ ಮಾನವೀಯತೆ ಗುಣಗಳು ಪ್ರಮುಖವಾಗಿವೆ. ಇವೆರಡೂ ಇದ್ದಲ್ಲಿ ಭ್ರಷ್ಟಾಚಾರ ಹಾಗೂ ಅಪರಾಧಗಳಿಗೆ ಜಾಗವಿರುವುದಿಲ್ಲ. ಜಗತ್ತನ್ನು ತಂತ್ರಜ್ಞಾನ ಆಳುತ್ತಿರುವ ಇಂದಿನ ದಿನಗಳಲ್ಲಿ, ಗುರು ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಅಗತ್ಯವಿದೆ. ನೈತಿಕ ಪಾಠಗಳು ಶಾಂತಿ ಸೌಹಾರ್ದದ ನಾಡನ್ನು ಕಟ್ಟುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ’ ಎಂದರು.

ADVERTISEMENT

ಚಲನಚಿತ್ರ ನಟ ವಿಜಯ್ ರಾಘವೇಂದ್ರ, ‘ಮೊಬೈಲ್ ಮೋಹದಲ್ಲಿ ಯುವಕರು ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅನಗತ್ಯ ವಿಷಯಗಳಲ್ಲಿ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಮಕ್ಕಳಿಗೆ ಮೌಲ್ಯಯುತ ವಿಚಾರಧಾರೆಗಳನ್ನು ಕಲಿಸಬೇಕು’ ಎಂದು ಹೇಳಿದರು.

ಶಿಕ್ಷಣ, ಸಾಹಿತ್ಯ ಕ್ಷೇತ್ರದ ಜತೆಗೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಇದೇ ವೇಳೆ ಅಭಿನಂದಿಸಲಾಯಿತು. ಚಲನಚಿತ್ರ ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ, ಎಸಿಪಿ ( ಪಶ್ಚಿಮ ವಿಭಾಗ) ಉಮಾರಾಣಿ ಎಸ್., ಕಾರಾಗೃಹಗಳ ಅಧೀಕ್ಷಕ ಶ್ರೀಶೈಲ್ ಎಸ್. ಮೇಟಿ, ನಬಿರೋಷನ್ ಪ್ರಕಾಶನದ ಮೌಲಾಲಿ ಕೆ. ಅಲಗೂರ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.