ADVERTISEMENT

ಸೀಲ್‌ಡೌನ್‌: ಮುದ್ದನಪಾಳ್ಯಕ್ಕೆ ಗ್ರಾಮಪಡೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 17:51 IST
Last Updated 6 ಜೂನ್ 2020, 17:51 IST
ತಹಶೀಲ್ದಾರ್‌ ರಘುಮೂರ್ತಿಯವರು ಗ್ರಾಮಸ್ಥರ ಕುಂದು–ಕೊರತೆ ಆಲಿಸಿದರು.ಡಾ. ಶ್ರೀನಿವಾಸ್, ಡಾ. ಜಯರಾಂ ಇದ್ದರು 
ತಹಶೀಲ್ದಾರ್‌ ರಘುಮೂರ್ತಿಯವರು ಗ್ರಾಮಸ್ಥರ ಕುಂದು–ಕೊರತೆ ಆಲಿಸಿದರು.ಡಾ. ಶ್ರೀನಿವಾಸ್, ಡಾ. ಜಯರಾಂ ಇದ್ದರು    

ಹೆಸರಘಟ್ಟ: ‘ಸೀಲ್‍ಡೌನ್ ಆಗಿರುವ ಮುದ್ದನಪಾಳ್ಯದಲ್ಲಿ ಗ್ರಾಮಸ್ಥರಿಗೆ ಅಗತ್ಯವಸ್ತುಗಳನ್ನು ಪೂರೈಸಲು ಕಸಘಟ್ಟಪುರ ಗ್ರಾಮ ಪಂಚಾಯಿತಿಯ ನೇತೃತ್ವದಲ್ಲಿ ಗ್ರಾಮಪಡೆ ರಚಿಸಲಾಗಿದೆ’ ಎಂದು ಯಲಹಂಕ ತಹಶೀಲ್ದಾರ್‌ ರಘುಮೂರ್ತಿ ತಿಳಿಸಿದರು.

ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ನೀರು ಸರಬರಾಜು ಮಾಡುವ ಕೆಲಸಗಾರರಿಗೆ ಗ್ರಾಮಸ್ಥರಿಗೆ ಹಾಲು ಪೂರೈಸುವ ಜವಾಬ್ದಾರಿ ನೀಡಲಾಗಿದೆ. ತರಕಾರಿ, ದಿನಸಿ ಪದಾರ್ಥಗಳನ್ನು ಜನರಿಗೆ ವಿತರಿಸುವ ಕೆಲಸವನ್ನು ಕರವಸೂಲಿಗಾರರು ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

‘ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಗ್ರಾಮಸ್ಥರಿಗೆ ನಿತ್ಯ ಆರೋಗ್ಯ ತಪಾಸಣೆ ಮಾಡಿ, ಅಗತ್ಯವಿರುವವರಿಗೆ ಮಾತ್ರೆಗಳನ್ನು ಆಶಾ ಕಾರ್ಯಕರ್ತರು ಪೂರೈಸುತ್ತಿದ್ದಾರೆ.ಪಶು ವೈದ್ಯಾಧಿಕಾರಿಗಳು ಗ್ರಾಮದ ಎಲ್ಲ ದನಕರುಗಳ ಆರೋಗ್ಯ ತಪಾಸಣೆ ಮಾಡಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.

ADVERTISEMENT

‘ಗ್ರಾಮಸ್ಥರು ಅನವಶ್ಯಕವಾಗಿ ಹೊರಗೆ ಓಡಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದೇ 17ರವರೆಗೆ ಗ್ರಾಮ ಸೀಲ್‌ಡೌನ್‌ ಆಗಿರಲಿದೆ’ ಎಂದು ಅವರು ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಶ್ರೀನಿವಾಸ್, ಚಿಕ್ಕಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಜಯರಾಮ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.