
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಲ್ಲಿನ 10 ಮಹಾನಗರ ಪಾಲಿಕೆಗಳ ನೌಕರರು ಜುಲೈ 8ರಂದು ಸಾಮೂಹಿಕ ರಜೆ ಹಾಕಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬೆಳಗಾವಿ, ಕಲಬುರಗಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ವಿಜಯಪುರ ಮಹಾನಗರ ಪಾಲಿಕೆಗಳ ನೌಕರರ ಸಂಘದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಉಳಿದ ನೌಕರರು ಆಯಾ ನಗರ ಪಾಲಿಕೆಗಳ ಆವರಣದಲ್ಲಿ ಮಂಗಳವಾರ ಪ್ರತಿಭಟಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್‌ನ ಅಧ್ಯಕ್ಷ ಎ. ಅಮೃತ್‌ರಾಜ್ ತಿಳಿಸಿದರು.
‘ಪಾಲಿಕೆಗಳ ಅಧಿಕಾರಿ, ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ನಗರಾಭಿವೃದ್ಧಿ ಸಚಿವರು ಹಾಗೂ ಕಾರ್ಯದರ್ಶಿಯವರಿಗೆ ಹಲವು ಬಾರಿ ಮನವಿ ಪತ್ರಗಳನ್ನು ನೀಡಲಾಗಿದೆ. ಆದರೂ ಸ್ಪಂದಿಸಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಡೆಸಲಿದ್ದೇವೆ’ ಎಂದು ಹೇಳಿದರು.
‘ಸರ್ಕಾರಿ ನೌಕರರಿಗೆ ನೀಡಿರುವ 7ನೇ ವೇತನ ಆಯೋಗದ ಸೌಲಭ್ಯ ನೀಡಲು ಪಾಲಿಕೆಗಳ ಸಿಬ್ಬಂದಿಗೂ ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು. ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಬೇಕು. ಕೆಜಿಐಡಿ ಮತ್ತು ಜಿಪಿಎಫ್ ಸೌಲಭ್ಯವನ್ನು ಮಹಾನಗರ ಪಾಲಿಕೆ ಅಧಿಕಾರಿ/ನೌಕರರಿಗೆ ಜಾರಿಗೊಳಿಸಬೇಕು ಎಂದು ಬೇಡಿಕೆ ಇರಿಸಲಾಗಿದೆ’ ಎಂದರು.
‘ಪೌರಕಾರ್ಮಿಕರು ಸೇರಿದಂತೆ ನಗರ ಪಾಲಿಕೆಗಳಲ್ಲಿರುವ ಎಲ್ಲ ವಿಭಾಗದ ಸಿಬ್ಬಂದಿಯೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.