ADVERTISEMENT

ಮುನಿರತ್ನ ನಿವಾಸದ ಬಳಿ ಸ್ಫೋಟ ಪ್ರಕರಣ: ‘ಮೃತ ವೆಂಕಟೇಶ್‌ನದ್ದೇ ನಿರ್ಲಕ್ಷ್ಯ’

ಶಾಸಕ ಮುನಿರತ್ನ ಗೋದಾಮು ಬಳಿ ಸ್ಫೋಟ * ದೂರು ಕೊಟ್ಟ ಕಾರು ಚಾಲಕ

​ಪ್ರಜಾವಾಣಿ ವಾರ್ತೆ
Published 21 ಮೇ 2019, 1:02 IST
Last Updated 21 ಮೇ 2019, 1:02 IST
   

ಬೆಂಗಳೂರು: ಶಾಸಕ ಮುನಿರತ್ನ ಅವರ ಗೋದಾಮು ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ್ದ ಸ್ಫೋಟದ ಬಗ್ಗೆ, ಅವರ ಕಾರು ಚಾಲಕ ಪ್ರಸನ್ನ ಎಂಬುವರು ವೈಯಾಲಿಕಾವಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ‘ದೂರುದಾರ ಪ್ರಸನ್ನ,ಸುಮಾರು 10 ವರ್ಷಗಳಿಂದ ಶಾಸಕರ ಮನೆಯಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸ್ಫೋಟದ ವೇಳೆ ಅವರು ಸಹ ಸ್ಥಳದಲ್ಲಿದ್ದರು. ಅವರ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಯಾರು ಎಂಬುದನ್ನು ಸದ್ಯಕ್ಕೆ ಉಲ್ಲೇಖಿಸಿಲ್ಲ’ ಎಂದು ಹೇಳಿದರು.

ದೂರಿನ ವಿವರ: ’ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ಪಾರ್ಕಿಂಗ್ ಸ್ಥಳದಲ್ಲಿ ಕಾರು ಸ್ವಚ್ಛಗೊಳಿಸುತ್ತಿದ್ದೆ. ವೆಂಕಟೇಶ್ ಅವರು ಕೈಯಲ್ಲಿ 30 ಲೀಟರ್ ಸಾಮರ್ಥ್ಯದ ನೀಲಿ ಬಣ್ಣದ ಕ್ಯಾನ್‌ ಹಿಡಿದುಕೊಂಡು ನಿರ್ಲಕ್ಷ್ಯದಿಂದ ಮೊಬೈಲ್‌ನಲ್ಲಿ ಮಾತನಾಡುತ್ತ, ನನ್ನ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು’ ಎಂದು ಪ್ರಸನ್ನ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಇದ್ದಕ್ಕಿದ್ದಂತೆ ಜೋರಾದ ಸ್ಫೋಟದ ಸದ್ದು ಕೇಳಿಸಿತು. ಅದರಿಂದ ಭಯವಾಗಿ, ಕಾರಿನ ಕೆಳಗೆ ಅವಿತು ಕುಳಿತುಕೊಂಡೆ. ಕೆಲ ನಿಮಿಷದ ನಂತರ ಸ್ಫೋಟದ ಸ್ಥಳಕ್ಕೆ ಹೋಗಿ ನೋಡಿದಾಗ, ವೆಂಕಟೇಶ್‌ ಅವರ ದೇಹ ಛಿದ್ರವಾಗಿ ಬಿದ್ದಿತ್ತು. ಅಷ್ಟರಲ್ಲೇ ಅಕ್ಕ–ಪಕ್ಕದ ನಿವಾಸಿಗಳು ಸಹ ಸ್ಥಳಕ್ಕೆ ಬಂದಿದ್ದರು.’

‘ಸ್ಥಳದಲ್ಲಿದ್ದ ಗನ್‌ಮ್ಯಾನ್ ಶ್ರೀನಿವಾಸ್ ಅವರೇ ಠಾಣೆಗೆ ಮಾಹಿತಿ ನೀಡಿದ್ದರು. ಆ ಬಳಿಕವೇ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಈ ಸ್ಫೋಟದ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ’ ಎಂದು ಪ್ರಸನ್ನ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.