
ಬಿಜೆಪಿಯ ಮುನಿರತ್ನ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ನನಗಿಂತಲೂ ಆರ್‌ಎಸ್‌ಎಸ್‌ನಲ್ಲಿ ನೀವೇ ಹಳಬರು. ‘ನಮಸ್ತೆ ಸದಾ ವತ್ಸಲೇ’ ಗೀತೆ ಮೊದಲು ಕಲಿತವರೇ ನೀವು’ ಎಂದು ಬಿಜೆಪಿಯ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಲೆಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಆರ್.ಆರ್. ನಗರದ ಶಾಸಕ ಮುನಿರತ್ನ ಅವರು ಸುಮನಹಳ್ಳಿ ಮೇಲ್ಸೇತುವೆ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕೆಟ್ಟುಹೋಗಿರುವ ಬಗ್ಗೆ ಪ್ರಸ್ತಾಪಿಸಿದರು. ‘ಬೀದಿ ದೀಪಗಳನ್ನು ಸರಿಪಡಿಸಿರುವುದಾಗಿ ಸರ್ಕಾರ ಉತ್ತರ ನೀಡಿದೆ. ಆದರೆ, ಅಲ್ಲಿ ದೀಪಗಳೇ ಇಲ್ಲದಿದ್ದಾಗ ಸರಿಪಡಿಸುವ ಮಾತೆಲ್ಲಿ ಬರುತ್ತದೆ’ ಎಂದು ಪ್ರಶ್ನಿಸಿದರು.
‘ನನ್ನ ಕ್ಷೇತ್ರ ವರ್ತುಲ ರಸ್ತೆಯ 30 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ. ಸಂಜೆ ಸ್ವಿಚ್ ಹಾಕಿದರೂ ದೀಪಗಳು ಉರಿಯುವುದಿಲ್ಲ. ನೂರು ಲೈಟ್ ಇದ್ದರೆ ಅದರಲ್ಲಿ ಅರವತ್ತು ಉರಿಯುತ್ತವೆ’ ಎಂದರು.
ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ಶಿವಕುಮಾರ್, ಹಳೆಯ ಘಟನೆ ನೆನಪಿಸಿದರು. ‘ನಿಮ್ಮ ಕ್ಷೇತ್ರದ ಸಮಸ್ಯೆ ಆಲಿಸಲು ನಾವು ಸಭೆ ಕರೆದಿದ್ದೆವು. ಆದರೆ, ನೀವು ಆ ಸಭೆಗೆ ಟೋಪಿ ಹಾಕಿಕೊಂಡು ಬಂದು ಏನೇನೊ ಮಾಡಿದಿರಿ’ ಎಂದು ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುನಿರತ್ನ, ‘ಮೂಗು ಇರೋವರೆಗೂ ನೆಗಡಿ ಹೋಗೋದಿಲ್ಲ. ಅದು ನಡೆಯುತ್ತಲೇ ಇರುತ್ತೆ ಬಿಡಿ ಸರ್’ ಎಂದರು.
ತಕ್ಷಣವೇ ಶಿವಕುಮಾರ್, ‘ಅದು ನಿಮ್ಮ ಚರಿತ್ರೆಯಲ್ಲೇ ಬಂದುಬಿಟ್ಟಿದೆ’ ಎಂದು ಟಾಂಗ್ ನೀಡಿದರು. ‘ಅದು ಹೋಗೋದಿಲ್ಲ ಬಿಡಿ ಸರ್, ಈಗ ಸಮಸ್ಯೆ ಬಗ್ಗೆ ಹೇಳಿ’ ಎಂದು ಮುನಿರತ್ನ ಪ್ರತಿಕ್ರಿಯಿಸಿದರು.
ಅದಕ್ಕೆ ಶಿವಕುಮಾರ್, ‘ಬಾ ಅಂತಾ ಕರೆದರೆ ಚಡ್ಡಿ ಹಾಕಿಕೊಂಡು ಕುಳಿತುಕೊಂಡೆ. ನಿನ್ನ ಆ ರೂಪಕ್ಕೆ ಉತ್ತರ ಕೊಡಬೇಕಲ್ವಾ ನಾನು? ಟೋಪಿ ಹಾಕಬೇಡ ಅಂತಾ ಹೇಳೋದಿಲ್ಲ, ಹಾಕು, ನಿನಗೆ ಅದು ಹೊಸತು’ ಎಂದು ತಿರುಗೇಟು ನೀಡಿದರು.
ಆಗ ಮುನಿರತ್ನ, ‘ನೀವು ನನಗಿಂತಲೂ ಆರ್‌ಎಸ್‌ಎಸ್‌ಗೆ ಹಳಬರು ಸರ್. ‘ನಮಸ್ತೆ ಸದಾ ವತ್ಸಲೇ’ ಗೀತೆಯನ್ನು ಹಾಡಿದ್ದೀರಿ. ಆರ್‌ಎಸ್‌ಎಸ್ ಗೀತೆಯನ್ನು ಫಸ್ಟ್ ನೀವು ಕಲಿತವರು, ನೀವು ಸೀನಿಯರ್’ ಎಂದು ಚಾಟಿ ಬೀಸಿದರು.
ನಗುತ್ತಲೇ ಉತ್ತರಿಸಿದ ಶಿವಕುಮಾರ್, ‘ನನ್ನ ಗರಡಿಯಲ್ಲಿ ನೀನು ಕಲಿತವನು. ನಿನ್ನ ಕ್ಷೇತ್ರದ ಬಗ್ಗೆ ಚರ್ಚಿಸಲು ಗೌರವದಿಂದ ಕರೆದಿದ್ದೆವು’ ಎಂದು ಚರ್ಚೆಗೆ ಅಂತ್ಯ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.