ADVERTISEMENT

ಡಿಕೆಶಿ ಕೈಯಿಂದ ಬೆಂಗಳೂರು ಅಭಿವೃದ್ಧಿ ಸಚಿವಗಿರಿ ಕಿತ್ತುಕೊಳ್ಳಿ: ಮುನಿರತ್ನ

ದಕ್ಷ, ಪ್ರಾಮಾಣಿಕರಿಗೆ ಖಾತೆ ನೀಡುವಂತೆ ಸಿಎಂಗೆ ಮುನಿರತ್ನ ಪತ್ರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 16:23 IST
Last Updated 13 ಫೆಬ್ರುವರಿ 2025, 16:23 IST
ಎನ್‌.ಮುನಿರತ್ನ
ಎನ್‌.ಮುನಿರತ್ನ   

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರನ್ನು ಬದಲಿಸಿ, ದಕ್ಷ ಮತ್ತು ಪ್ರಾಮಾಣಿಕರೊಬ್ಬರಿಗೆ ಈ ಜವಾಬ್ದಾರಿ ನೀಡಬೇಕು ಎಂದು ಆರ್‌.ಆರ್‌.ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್. ಮುನಿರತ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯವರಿಗೆ ನಿಜವಾಗಿ ಬೆಂಗಳೂರಿನ ಬಗ್ಗೆ ಕಳಕಳಿ ಇದ್ದರೆ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಕೃಷ್ಣಬೈರೇಗೌಡ ಇವರಲ್ಲಿ ಒಬ್ಬರನ್ನು ನೇಮಕ ಮಾಡುವಂತೆ ಎರಡು ಪುಟಗಳ ಪತ್ರದಲ್ಲಿ ಆಗ್ರಹಿಸಿದ್ದಾರೆ.

‘ಈ ಮೂವರ ಪೈಕಿ ಯಾರ ಬಗ್ಗೆಯೂ ಒಲವು ಇಲ್ಲದ್ದಿದ್ದರೆ, ಸಚಿವ ದಿನೇಶ್‌ ಗುಂಡೂರಾವ್‌, ವಿಜಯನಗರದ ಶಾಸಕ ಎಂ.ಕೃಷ್ಣಪ್ಪ ಅವರನ್ನಾದರೂ ನೇಮಕ ಮಾಡಬಹುದು. ಈ ರೀತಿ ಬದಲಾವಣೆ ಮಾಡಿದರೆ ಸರ್ಕಾರಕ್ಕೆ ಎರಡು ವರ್ಷಗಳ ಕಳಂಕವನ್ನು ತೊಳೆದುಕೊಳ್ಳಲು ಅನುಕೂಲವಾಗುತ್ತದೆ. ಯಾರಾದರೂ ಒಬ್ಬ ಒಳ್ಳೆಯ ವ್ಯಕ್ತಿಗೆ ಈ ಖಾತೆ ನೀಡಿ’ ಎಂದು ಮುನಿರತ್ನ ಮನವಿ ಮಾಡಿದ್ದಾರೆ.

ADVERTISEMENT

‘ಬೆಂಗಳೂರು ನಗರಾಭಿವೃದ್ಧಿ ಸಚಿವರೇ ತಾರಾ ಹೋಟೆಲ್‌ಗಳಲ್ಲಿ ಕುಳಿತು ವ್ಯವಹಾರ ಕುದುರಿಸುತ್ತಾರೆ. ನಗರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಪಾರ್ಟ್‌ಮೆಂಟ್‌ ಕಟ್ಟಡ ನಿರ್ಮಾಣದ ನಕ್ಷೆ ಮಂಜೂರಾತಿಗೆ ಮುಂಚಿತವಾಗಿ ಒಂದು ಚದರಡಿಗೆ ₹150 ಕೊಡುವಂತೆ ಭ್ರಷ್ಟಾಚಾರ, ಎಲ್‌ಒಸಿಗಳಲ್ಲಿ ಭ್ರಷ್ಟಾಚಾರ, ನಾಗಮೋಹನದಾಸ್‌ ಸಮಿತಿ ಹೆಸರಲ್ಲಿ ಗುತ್ತಿಗೆದಾರರ ಕಾಮಗಾರಿಗಳಲ್ಲಿ ಶೇ 10 ರಷ್ಟು ಕಟಾವು ಮಾಡಿ ನಂತರ ಬಿಡುಗಡೆ ಮಾಡುತ್ತಾರೆ’ ಎಂದು ದೂರಿದ್ದಾರೆ.

ಹಲವು ಐಟಿ– ಬಿಟಿ ಕಂಪನಿಗಳು ಹೈದರಾಬಾದ್‌ಗೆ ವಲಸೆ ಹೋಗುತ್ತಿವೆ. ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ‘ನಾನು ಈ ರೀತಿ ಪತ್ರ ಬರೆದಿರುವುದರಿಂದ ನನ್ನ ವಿರುದ್ಧ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಪೋಕ್ಸೊ ಕೇಸುಗಳನ್ನೂ ದಾಖಲಿಸಬಹುದು’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

‘ಶೇ 35 ಕಮಿಷನ್‌ ಕೊಟ್ಟರಷ್ಟೇ ಟೆಂಡರ್‌’

ಆಂಧ್ರ ಪ್ರದೇಶದ ಮುಖ್ಯಮಂತ್ರಿಯವರ ಸಹಚರರು ನಮ್ಮ ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ. ಇತರ ರಾಜ್ಯಗಳ ಗುತ್ತಿಗೆದಾರರಿಗೆ ಶೇ 12 ರಷ್ಟು ಮುಂಗಡ ಅನುದಾನ ನೀಡಿದ್ದಾರೆ. ಕಾರ್ಯಾದೇಶ ಕೊಟ್ಟ ನಂತರ ಶೇ 8 ಅನುದಾನ ಬಿಡುಗಡೆ ಮಾಡಲು ಶೇ 15 ರಷ್ಟು ಕಮಿಷನ್‌ ಪಡೆಯಲಾಗುತ್ತದೆ. ಒಟ್ಟಾರೆ ಶೇ 35 ಕ್ಕೆ ವ್ಯವಹಾರ ಕುದುರಿಸಿ ಮುಂಗಡ ಹಣ ನೀಡಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ. ‘ಬಿಬಿಎಂಪಿ ಎಂಜಿನಿಯರ್‌ಗಳು ಗುತ್ತಿಗೆದಾರರ ಜತೆ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆ. ಬದುಕುತ್ತಿದ್ದಾರೆ. ಸ್ವಿಸ್‌ ಬ್ಯಾಂಕಿನಲ್ಲಿ ಹಣ ಇಡುವಷ್ಟು ಭಾರಿ ಪ್ರಮಾಣದಲ್ಲಿ ವಸೂಲಿ ಮಾಡುತ್ತಿದ್ದಾರೆ. ಸಚಿವರು ವಸೂಲಿ ಮಾಡಲು ಏಜೆಂಟ್‌ಗಳನ್ನೂ ನೇಮಕ ಮಾಡಿದ್ದಾರೆ.  ಅನುದಾನ ದುರುಪಯೋಗವಾದರೆ ಕಪ್ಪು ಚುಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮ(ಸಿದ್ದರಾಮಯ್ಯ) ಅವಧಿಯಲ್ಲಿ ಇದಕ್ಕೆ ಆಸ್ಪದ ನೀಡಬಾರದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.