
ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ವಿವಾಹಿತ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ನರಸಿಂಹರಾಜು (32) ಮೇಲೆ ಮಹಿಳೆಯ ಸಂಬಂಧಿಕರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೀಕೆರೆ ಬಳಿಯ ಮುತ್ತ್ಯಾಲನಗರದ ನರಸಿಂಹರಾಜು, ಗಾರೆ ಕೆಲಸ ಮಾಡುತ್ತಿದ್ದ. ಅದೇ ಬಡಾವಣೆಯ ಮಹಿಳೆಯೊಂದಿಗೆ ಸಲುಗೆ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯು ಶನಿವಾರ ನರಸಿಂಹರಾಜು ಮನೆಗೆ ಬಂದಿದ್ದರು. ಈ ವಿಚಾರ ತಿಳಿದ ಆಕೆಯ ಸಂಬಂಧಿಕರು ಹಿಂಬಾಲಿಸಿಕೊಂಡು ಮನೆ ಬಳಿಯೇ ಬಂದು ನರಸಿಂಹರಾಜು ಜತೆ ಜಗಳವಾಡಿ, ಹೊರಗೆ ಎಳೆದುಕೊಂಡು ಬಂದು ಥಳಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರೂ ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ನರಸಿಂಹರಾಜುನನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅನಾರೋಗ್ಯ ಸಮಸ್ಯೆಯಿತ್ತು. ಹೀಗಾಗಿ, ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾನೆಯೇ ಅಥವಾ ಹಲ್ಲೆಯಿಂದ ಸಾವನ್ನಪ್ಪಿದ್ದಾನೆಯೇ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮಹಿಳೆ ಮತ್ತು ಆಕೆಯ ಸಂಬಂಧಿಕರೇ ಅಣ್ಣನನ್ನು ಕೊಲೆ ಮಾಡಿದ್ದಾರೆ’ ಎಂದು ಮೃತರ ಸಹೋದರಿ ಧನಲಕ್ಷ್ಮೀ ಆರೋಪಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.