ADVERTISEMENT

ಪ್ರಿಯಕರನ ಜೊತೆಗಿನ ಸಂಬಂಧ: ಗಂಡನನ್ನೇ ಕೊಲ್ಲಿಸಿ ನಾಪತ್ತೆ ನಾಟಕವಾಡಿದಳು

ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ; ಮಹಿಳೆ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 4:27 IST
Last Updated 19 ಜುಲೈ 2020, 4:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪ್ರಿಯಕರನ ಜೊತೆಗಿನ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ತನ್ನ ಗಂಡನನ್ನೇ ಕೊಲ್ಲಿಸಿ ನಾಪತ್ತೆ ನಾಟಕವಾಡಿದ್ದ ಮಹಿಳೆ, ಅಮೃತಹಳ್ಳಿ ಠಾಣೆ ಪೊಲೀಸರ ಚುರುಕಿನ ತನಿಖೆಯಿಂದ ಸೆರೆ ಸಿಕ್ಕಿದ್ದಾಳೆ.

ಜುಲೈ 9ರತಡರಾತ್ರಿ ನಡೆದಿದ್ದ ಹರೀಶ್ (22) ಎಂಬುವರ ಕೊಲೆ ಪ್ರಕರಣ ಸಂಬಂಧ ಪತ್ನಿ ಕೃಪಾ (22), ಆಕೆಯ ಪ್ರಿಯಕರ ಅಭಿಲಾಷ್ (23) ಹಾಗೂ ಆತನ ಸ್ನೇಹಿತ ಮೊಹಮದ್ ರಫೀಕ್ (26) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಪೇಂಟಿಂಗ್ ಕೆಲಸ ಮಾಡುತ್ತಿದ್ದ ಹರೀಶ್ ಹಾಗೂ ಕೃಪಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಗೂ‌ ಮುನ್ನವೇ ಕೃಪಾ, ಆಟೊ ಚಾಲಕ ಅಭಿಲಾಷ್‌ನನ್ನು ಪ್ರೀತಿಸುತ್ತಿದ್ದಳು. ಮದುವೆ ಬಳಿಕವೂ ಅವರಿಬ್ಬರು ಆಗಾಗ ಭೇಟಿಯಾಗುತ್ತಿದ್ದರು. ಸಲುಗೆಯೂ ಇತ್ತು. ಈ ವಿಷಯ ಬಯಲಾಗಿ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಸಹ ಆಗಿತ್ತು. ಅಭಿಲಾಷ್ ಜೊತೆ ಮಾತನಾಡದಂತೆ ಹರೀಶ್ ಪತ್ನಿಗೆ ಎಚ್ಚರಿಕೆ ನೀಡಿದ್ದ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ADVERTISEMENT

‘ಗಂಡನ ಮಾತಿಗೆ ಬೆಲೆ ನೀಡದ ಕೃಪಾ, ಪುನಃ ಅಭಿಲಾಷ್ ಜೊತೆ ಮಾತನಾಡಲಾರಂಭಿಸಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ದಂಪತಿ ನಡುವೆ ನಿತ್ಯ ಜಗಳ ಆಗುತ್ತಿತ್ತು. ಇದರಿಂದಾಗಿ ಕೃಪಾ, ಗಂಡನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಳು.’

‘ಜುಲೈ 9ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಹರೀಶ್, ಊಟ ಮಾಡಿ‌ ಮಲಗಿದ್ದರು. ಕೃಪಾ ನೀಡಿದ್ದ ಮಾಹಿತಿಯಂತೆ ತಡರಾತ್ರಿ ಅಭಿಲಾಷ್ ಹಾಗೂ ಮೊಹಮದ್ ಮನೆಗೆ ಬಂದಿದ್ದರು. ಹರೀಶ್ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದ ಆರೋಪಿಗಳು, ದೇಹದ ಏಳು ಕಡೆ ಚಾಕುವಿನಿಂದ ಇರಿದು ಕೊಂದಿದ್ದರು’ ಎಂದೂ ಡಿಸಿಪಿ ಹೇಳಿದರು.

‘ಮೃತದೇಹವನ್ನು ಮೂಟೆಯಲ್ಲಿ ತುಂಬಿಕೊಂಡು ಮನೆಯಿಂದ ಹೊರಬಂದಿದ್ದ ಆರೋಪಿಗಳು, ಸಮೀಪದ ರಾಜಕಾಲುವೆಯಲ್ಲಿ ಎಸೆದು ಪರಾರಿಯಾಗಿದ್ದರು. ಮರುದಿನ ಠಾಣೆಗೆ ಬಂದಿದ್ದ ಕೃಪಾ, ಪತಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಳು. ಎಫ್‌ಐಆರ್‌ ಸಹ ದಾಖಲಿಸಿಕೊಳ್ಳಲಾಗಿತ್ತು.’

‘ಜುಲೈ 15ರಂದು ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಅದು ಹರೀಶ್‌ ಅವರದ್ದು ಎಂಬುದು ತಿಳಿಯಿತು. ನಂತರ, ಕೃಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಳು. ಆಕೆ ನೀಡಿದ್ದ ಮಾಹಿತಿಯಂತೆ ಪ್ರಿಯಕರನೂ ಸಿಕ್ಕಿಬಿದ್ದ’ ಎಂದೂ ಡಿಸಿಪಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.