ADVERTISEMENT

ಕುಂಬಳಗೋಡು ಬಾಲಕಿ ಸಿರಿ ಕೊಲೆ: ಮಲತಂದೆ ದರ್ಶನ್‌ ಬಂಧನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 16:08 IST
Last Updated 28 ಅಕ್ಟೋಬರ್ 2025, 16:08 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಮಲತಂದೆ ದರ್ಶನ್‌ನನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಅಕ್ಟೋಬರ್ 24ರಂದು ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯ ಮನೆಯೊಂದರಲ್ಲಿ ಸಿರಿ (7) ಎಂಬ ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿ ಬಳಿಕ ತಲೆಮರೆಸಿಕೊಂಡಿದ್ದ. ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಆರೋಪಿಯಿದ್ದ ಸ್ಥಳವನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ಬಾಲಕಿಯ ತಾಯಿ ಶಿಲ್ಪಾ ಅವರ ಮೊದಲ ಪತಿ ಮೃತಪಟ್ಟಿದ್ದರು. ನಂತರ, ದರ್ಶನ್ ಜತೆಗೆ ಎರಡನೇ ಮದುವೆ ಆಗಿದ್ದರು. ಆನೇಕಲ್‌ನಲ್ಲಿದ್ದ ಕಂಪನಿಯೊಂದರಲ್ಲಿ ದರ್ಶನ್ ಕೆಲಸ ಮಾಡುತ್ತಿದ್ದ. ಮದುವೆಯಾದ ಆರಂಭದಲ್ಲಿ ಮಗುವನ್ನು ದರ್ಶನ್‌ ಪ್ರೀತಿಯಿಂದ‌ ನೋಡಿಕೊಳ್ಳುತ್ತಿದ್ದ. ಕೆಲವು ದಿನ ಕಳೆದ ಮೇಲೆ ಖಾಸಗಿ ಸಮಯಕ್ಕೆ ಸಿರಿ ಅಡ್ಡಿ ಆಗುತ್ತಿದ್ದಾಳೆಂದು ಥಳಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

ಹೆದರಿ ಅಂಗಡಿಯ ಎದುರೇ ನಿಂತಿದ್ದ ಮಗು

‘ಶುಕ್ರವಾರ ಸಂಜೆ ತಾಯಿ ಮನೆಯಲ್ಲಿ ಇಲ್ಲ ಎಂಬ ಮಾಹಿತಿ ಪಡೆದಿದ್ದ ಸಿರಿ, ಮನೆ ಎದುರಿಗಿದ್ದ ಅಂಗಡಿ ಎದುರು ನಿಂತಿದ್ದಳು. ಈ ವೇಳೆ ಮನೆಯಲ್ಲಿದ್ದ ದರ್ಶನ್, ಬಾಲಕಿಯನ್ನು ಹುಡುಕಿಕೊಂಡು ಬಂದಿದ್ದ. ಅಂಗಡಿ ಬಳಿಯಿದ್ದ ಸಿರಿಯನ್ನು ಮನೆಗೆ ಹೋಗಲು ಕರೆದಾಗ ಆಕೆ ಮನೆಗೆ ಬರುವುದಿಲ್ಲ ಎಂದು ಹಟ ಮಾಡಿದ್ದಳು. ಅಲ್ಲಿದ್ದವರ ಬಳಿ ಅಪ್ಪ ನನಗೆ ಹೊಡೆಯುತ್ತಾನೆ ಎಂದು ಹೇಳಿದ್ದಳು. ಆದರೂ ದರ್ಶನ್ ಬಲವಂತವಾಗಿ ಸಿರಿಯನ್ನು ಮನೆಗೆ ಕರೆದೊಯ್ದಿದ್ದ. ಮನೆಗೆ ಬಂದ ಬಳಿಕ ಕೋಪದಲ್ಲಿ ಸಿರಿಯನ್ನು ಥಳಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.