ADVERTISEMENT

₹10 ಸಾವಿರ ಕೊಡದಿದ್ದಕ್ಕೆ ಕೊಲೆ; ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 22:59 IST
Last Updated 20 ಮಾರ್ಚ್ 2020, 22:59 IST
ಶ್ರೀನಾಥ್ ಹಾಗೂ ಅರುಣ್‌ಕುಮಾರ್
ಶ್ರೀನಾಥ್ ಹಾಗೂ ಅರುಣ್‌ಕುಮಾರ್   

ಬೆಂಗಳೂರು: ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲೈಂಗಿಕ ಅಲ್ಪ ಸಂಖ್ಯಾತೆ ವಿಜಿ ಅಲಿಯಾಸ್ ವಿಜಯ್ ಎಂಬುವರ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಅರುಣ್‌ಕುಮಾರ್ (27) ಹಾಗೂ ಪಿ.ವಿ.ಶ್ರೀನಾಥ್ (30) ಬಂಧಿತರು. ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ಆಟೊವನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು. ’ಚಿಕ್ಕನಗೌಡಪಾಳ್ಯದ ವಿಜಯ್, ಕೆಲ ತಿಂಗಳ ಹಿಂದಷ್ಟೇ ಲಿಂಗ ಬದಲಾವಣೆ ಮಾಡಿಕೊಂಡು ವಿಜಿ ಆಗಿದ್ದರು. ಆರೋಪಿ ಅರುಣ್‌ಕುಮಾರ್ ಜೊತೆ ಒಂದೇ ಮನೆಯಲ್ಲಿ ನೆಲೆಸಿದ್ದರು.’

‘ವಿಜಿ ಅವರಿಗೆ ₹ 10 ಸಾವಿರ ಸಾಲ ಕೊಟ್ಟಿದ್ದ ಆರೋಪಿಗಳು, ಅದನ್ನು ವಾಪಸು ಕೊಡುವಂತೆ ಒತ್ತಾಯಿಸುತ್ತಿದ್ದರು. ಹಣವಿಲ್ಲವೆಂದು ವಿಜಿ ಹೇಳಿದ್ದರು. ಕೋಪಗೊಂಡ ಆರೋಪಿಗಳು ಪದೇ ಪದೇ ಮನೆಯಲ್ಲಿ ಜಗಳ ಮಾಡಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಇದೇ 17ರಂದು ಮದ್ಯ ಕುಡಿದು ಮನೆಗೆ ಬಂದಿದ್ದ ಆರೋಪಿಗಳು, ವಿಜಿ ಜೊತೆ ಪುನಃ ಜಗಳ ತೆಗೆದು ಚಾಕುವಿನಿಂದ ಇರಿದಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ವಿಜಿ ಅವರನ್ನು ಆರೋಪಿಗಳೇ ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ. ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದರು. ಆಟೊವನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ದಾಖ ಲಾಗಿ 48 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಹಣ ಕೊಡದಿದ್ದಕ್ಕೆ ಪತಿಗೇ ಬೆಂಕಿ!

ತನ್ನ ಖರ್ಚಿಗೆ ₹1,000 ಕೊಡಲಿಲ್ಲವೆಂದು ಕೋಪಗೊಂಡ ಮಹಿಳೆ ಯೊಬ್ಬಳು ತನ್ನ ತಾಯಿ ಜೊತೆ ಸೇರಿ ಪತಿ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಆರೀಫ್ (24) ಎಂಬುವರು ದೂರು ನೀಡಿದ್ದಾರೆ. ಪತ್ನಿ ಅಮರೀನ್ ಬಾಬು ಹಾಗೂ ಆಕೆಯ ತಾಯಿ ಫಾರೂ ಎಂಬುವರ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಾಲಕರಾಗಿರುವ ಆರೀಫ್ ಹಾಗೂ ಪತ್ನಿ ಗಂಗೊಂಡನಹಳ್ಳಿಯಲ್ಲಿ ಹೊಸದಾಗಿ ಮನೆ ಮಾಡಿದ್ದರು. ಅವರ ಜೊತೆ ಫಾರೂ ಸಹ ಇದ್ದಾರೆ. ಮನೆ ಪೇಂಟಿಂಗ್ ಮಾಡಲೆಂದು ₹2,000 ಇಟ್ಟುಕೊಂಡಿದ್ದರು. ಅದರಲ್ಲಿ ₹1,000 ತನಗೆ ಕೊಡುವಂತೆ ಪತ್ನಿ ಹಟ ಹಿಡಿದಿದ್ದಳು.’

‘ಮಾ. 15ರಂದು ಹಣದ ವಿಚಾರವಾಗಿಯೇ ಆರೀಫ್ ಜೊತೆ ಜಗಳ ತೆಗೆದಿದ್ದ ಪತ್ನಿ ಅಮರೀನ್, ಹಣ ಕೊಡದಿದ್ದರೆ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಸಾಯುವುದಾಗಿ ಬೆದರಿಸಿದ್ದಳು. ಮಧ್ಯಪ್ರವೇಶಿಸಿದ್ದ ಫಾರೂ, ಅಮರೀನ್‌ ಜೊತೆ ಸೇರಿ ಆರೀಫ್‌ ಮೇಲೆಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಳು’ ಎಂದು ಪೊಲೀಸರು ಹೇಳಿದರು.

‘ಮೈ ಮೇಲೆ ಬೆಂಕಿ ಉರಿಯುತ್ತಿದ್ದಾಗಲೇ ಆರೀಫ್, ಮನೆಯಿಂದ ಹೊರಗೆ ಬಂದು ಚೀರಾಡಿದ್ದರು. ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಿದ್ದರು. ಬಳಿಕ, ಆರೀಫ್‌ ಅವರನ್ನು ಆಟೊದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದೆ. ಅವರ ಎದೆ, ಕೈ ಹಾಗೂ ಬೆನ್ನು ಭಾಗ ಸುಟ್ಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.