ADVERTISEMENT

ಮಂಚದ ಕೆಳಗೆ ಅವಿತು, ಪತ್ನಿ ಸ್ನೇಹಿತನ ಹತ್ಯೆ: ಆರೋಪಿ ಬಂಧನ

ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಆರೋಪಿ ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 9:20 IST
Last Updated 25 ಮಾರ್ಚ್ 2021, 9:20 IST

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಶಿವಕುಮಾರ್ (27) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಭರತ್‌ಕುಮಾರ್ (31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಂಡಾ ನಿವಾಸಿ ಶಿವಕುಮಾರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಆರೋಪಿ ಭರತ್‌ಕುಮಾರ್ ಪತ್ನಿ ವಿನೂತಾ ಜೊತೆ ಸ್ನೇಹ ಬೆಳೆಸಿದ್ದ ಅವರು, ಸಲುಗೆ ಇಟ್ಟುಕೊಂಡಿದ್ದರು. ಪತಿಯನ್ನು ತೊರೆದಿದ್ದ ವಿನೂತಾ, ಶಿವಕುಮಾರ್ ಜೊತೆ ಅಂದ್ರಹಳ್ಳಿಯಲ್ಲಿ ವಾಸವಿದ್ದರು. ಅದೇ ಮನೆಯಲ್ಲೇ ಗುರುವಾರ ಬೆಳಿಗ್ಗೆ ಈ ಕೊಲೆ ನಡೆದಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ಮನೆಯಲ್ಲಿದ್ದ ಶಿವಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ಭರತ್‌ಕುಮಾರ್‌ನನ್ನು ಬಂಧಿಸಲಾಗಿದ್ದು, ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ಪ್ರೀತಿಸಿ ಮದುವೆಯಾಗಿದ್ದ ದಂಪತಿ: ‘ನೆಲಮಂಗಲ ನಿವಾಸಿಯಾದ ಆರೋಪಿ ಭರತ್‌ಕುಮಾರ್ ಹಾಗೂ ತರೀಕೆರೆ ತಾಂಡಾದ ವಿನೂತಾ, ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪರಿಚಯವಾಗಿ, ಪ್ರೀತಿಸಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಡಿಸಿಪಿ ಹೇಳಿದರು.

‘ಮದುವೆ ಬಳಿಕ ದಂಪತಿ ನೆಲಮಂಗಲದಲ್ಲಿ ವಾಸವಿದ್ದರು. ಕಳೆದ ವರ್ಷ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಶಿವಕುಮಾರ್, ವಿನೂತಾ ಮನೆಯಲ್ಲೇ ಉಳಿದುಕೊಂಡಿದ್ದರು. ಒಂದೇ ಊರಿನವರಾಗಿದ್ದರಿಂದ ವಿನೂತಾ ಹಾಗೂ ಶಿವಕುಮಾರ್ ನಡುವೆ ಸಲುಗೆ ಬೆಳೆದಿತ್ತು. ಅದು ಗೊತ್ತಾಗುತ್ತಿದ್ದಂತೆ ಭರತ್‌ಕುಮಾರ್‌, ಶಿವಕುಮಾರ್ ಜೊತೆ ಜಗಳ ತೆಗೆದು ಮನೆಯಿಂದ ಹೊರಹಾಕಿದ್ದ.’

‘ಶಿವಕುಮಾರ್ ಜೊತೆಯೇ ವಿನೂತಾ ಸಹ ಮನೆ ಬಿಟ್ಟು ಬಂದಿದ್ದರು. ಅವರಿಬ್ಬರು ಅಂದ್ರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಪತ್ನಿಯನ್ನು ಬೇರೆ ಮಾಡಿದನೆಂದು ಕೋಪಗೊಂಡಿದ್ದ ಭರತ್‌ಕುಮಾರ್, ಸಂಚು ರೂಪಿಸಿ ಶಿವಕುಮಾರ್‌ನನ್ನು ಕೊಂದಿದ್ದಾನೆ’ ಎಂದೂ ಅವರು ತಿಳಿಸಿದರು.

ಆನ್‌ಲೈನ್‌ನಲ್ಲಿ ಚಾಕು ಖರೀದಿ: ‘ಹತ್ಯೆಗೆಂದೇ ಆನ್‌ಲೈನ್‌ನಲ್ಲಿ ಚಾಕು ಖರೀದಿಸಿದ್ದ ಆರೋಪಿ, ಸಮಯಕ್ಕಾಗಿ ಕಾಯುತ್ತಿದ್ದ. ಬುಧವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಶಿವಕುಮಾರ್, ಮಧ್ಯಾಹ್ನ ವಿನೂತಾಗೆ ಕರೆ ಮಾಡಿದ್ದ. ಕೋಳಿ ಮಾಂಸ ತಂದು ರಾತ್ರಿ ಅಡುಗೆ ಮಾಡುವಂತೆ ಹೇಳಿದ್ದ.’

’ಮನೆಯ ಬಾಗಿಲಿನ ಚಿಲಕ ಹಾಕಿಕೊಂಡು ವಿನೂತಾ ಕೋಳಿ ಮಾಂಸ ತರಲು ಅಂಗಡಿಗೆ ಹೋಗಿದ್ದರು. ಅದೇ ಸಮಯಕ್ಕೆ ಚಿಲಕ ತೆರೆದು ಮನೆಯೊಳಗೆ ಬಂದಿದ್ದ ಆರೋಪಿ, ಮಂಚದ ಕೆಳಗೆ ಅವಿತು ಕುಳಿತಿದ್ದ. ಅದು ಯಾರಿಗೂ ಗೊತ್ತಿರಲಿಲ್ಲ. ಕೆಲಸ ಮುಗಿಸಿ ಮನೆಗೆ ಬಂದಿದ್ದ ಶಿವಕುಮಾರ್, ವಿನೂತಾ ಜೊತೆ ಸೇರಿ ಊಟ ಮಾಡಿ ಮಲಗಿದ್ದರು. ನಸುಕಿನಲ್ಲಿ ವಿನೂತಾ, ಶೌಚಾಲಯಕ್ಕೆ ಹೋಗಿದ್ದರು. ಹೊರಗಿನಿಂದ ಶೌಚಾಲಯದ ಚಿಲಕ ಹಾಕಿದ್ದ ಆರೋಪಿ, ಮಂಚದ ಮೇಲೆ ಮಲಗಿದ್ದ ಶಿವಕುಮಾರ್ ಅವರ ಕತ್ತು ಹಿಸುಕಿದ್ದ. ನಂತರ, ಚಾಕುವಿನಿಂದ ಹೊಟ್ಟೆಗೆ ಮೂರು ಬಾರಿ ಇರಿದು ಕೊಂದ’ ಎಂದೂ ಡಿಸಿಪಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.