ADVERTISEMENT

ಶೀಲದ ಬಗ್ಗೆ ಶಂಕೆ: ಪತ್ನಿ ಕೊಂದು ಮಕ್ಕಳ ಸಮೇತ ಪರಾರಿ

ಕೊಳೆತ ಸ್ಥಿತಿಯಲ್ಲಿ ಶವಪತ್ತೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:04 IST
Last Updated 29 ಸೆಪ್ಟೆಂಬರ್ 2019, 19:04 IST

ಬೆಂಗಳೂರು: ಬೇಗೂರು ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನಂದಿನಿ (25) ಎಂಬುವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.

ದೇವರಚಿಕ್ಕನಹಳ್ಳಿ 16ನೇ ಮುಖ್ಯರಸ್ತೆ ನಿವಾಸಿ ನಂದಿನಿ, ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮಧು ಅಲಿಯಾಸ್ ಆಟೊ ಮಧು ಎಂಬಾತನನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

‘ನಂದಿನಿ ಅವರನ್ನು ಪತಿಯೇ ಕೊಲೆ ಮಾಡಿರುವ ಶಂಕೆ ಇದ್ದು, ಕೃತ್ಯದ ಬಳಿಕ ಆತ ಮಕ್ಕಳ ಸಮೇತ ಪರಾಗಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಾಣಸವಾಡಿ ಸೇವಾನಗರದ ನಂದಿನಿ ಅವರನ್ನು ಮಧು ಪ್ರೀತಿಸಿ ಮದುವೆ ಆಗಿದ್ದ. ಬ್ಯೂಟಿಪಾರ್ಲರ್‌ ನಡೆಸುತ್ತಿದ್ದ ನಂದಿನಿ, ಇತ್ತೀಚೆಗೆ ಸ್ಥಗಿತಗೊಳಿಸಿ ಮನೆಯಲ್ಲೇ ಇದ್ದರು. ಮಧು, ಆಟೊ ಓಡಿಸುತ್ತಿದ್ದ.’

‘ಪತ್ನಿ ಶೀಲದ ಬಗ್ಗೆ ಶಂಕೆ ಇದ್ದು ಆಗಾಗ ಜಗಳ ತೆಗೆಯುತ್ತಿದ್ದ. 22ರಂದು ಜಗಳ ವಿಕೋಪಕ್ಕೆ ಹೋಗಿತ್ತು. ಆಗ ಉಸಿರುಗಟ್ಟಿಸಿ ಪತ್ನಿಯನ್ನು ಕೊಂದಿದ್ದಾನೆ ಎನ್ನಲಾಗಿದೆ. ಶವವನ್ನು ಮನೆಯಲ್ಲಿ ಮುಚ್ಚಿಟ್ಟು, ಹೊರಟು ಹೋಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಚಿಕ್ಕಮ್ಮನ ಮನೆಗೆ ಹೋಗಿದ್ದ: ‘ಮಧು, ಮಕ್ಕಳ ಸಮೇತ ಹಾಸನದಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿದ್ದ. ಪತ್ನಿ ಎಲ್ಲಿದ್ದಾಳೆ ಎಂದು ಚಿಕ್ಕಮ್ಮ ಪ್ರಶ್ನಿಸಿದ್ದರು. ಪ್ರತಿಕ್ರಿಯೆ ನೀಡದೇ ಅಲ್ಲಿಂದಲೂ ನಿರ್ಗಮಿಸಿದ್ದ’ ಎಂದು ತಿಳಿಸಿದರು.

‘ಮಧು ವರ್ತನೆಯಿಂದ ಶಂಕೆ ಗೊಂಡ ಚಿಕ್ಕಮ್ಮ, ಬೆಂಗಳೂರಿನ ಸಂಬಂಧಿಗೆ ಕರೆ ಮಾಡಿ ನಂದಿನಿ ಬಗ್ಗೆ ವಿಚಾರಿಸಿದ್ದರು. ಸಂಬಂಧಿ ಭಾನುವಾರ ಮನೆ ಬಳಿಗೆ ಬಂದಾಗ ಕೆಟ್ಟ ವಾಸನೆ ಬರುತ್ತಿತ್ತು. ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಬಾಗಿಲು ತೆರೆದು ನೋಡಿದಾಗಲೇ ಮೃತದೇಹ ಕಂಡಿತು’ ಎಂದು ಮಾಹಿತಿ ನೀಡಿದರು.

ಕಸದ ವಿಚಾರವಾಗಿ ಮನಸ್ತಾಪ; ಕೊಲೆ

ಚಿಕ್ಕಬೇಗೂರಿನಲ್ಲಿ ಮಹಮ್ಮದ್ ಜಮಲ್ (54) ಎಂಬವರ ಕೊಲೆ ಆಗಿದ್ದು, ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸ ಆಯುವ ಕೆಲಸ ಮಾಡುತ್ತಿದ್ದ ಜಮಲ್, ಪತ್ನಿ ಹಾಗೂ ಮಕ್ಕಳ ಜೊತೆ ವಾಸವಿದ್ದರು.

‘ಪರಿಚಯವಿದ್ದ ದೆಹಲಿಯ ಮೀಜಾನ್ ಎಂಬುವರನ್ನು ನಗರಕ್ಕೆ ಕರೆಸಿದ್ದ ಜಮಲ್, ಕಸ ಆಯುವ ಕೆಲಸ ಮಾಡಿಸುತ್ತಿದ್ದರು. ಇತ್ತೀಚೆಗೆ ಮೀಜಾನ್ ಆಯ್ದಿದ್ದ ಕಸವನ್ನು ಮೀರಾಜ್ ಎಂಬಾತ ಖರೀದಿಸಿದ್ದ. ಅದನ್ನು ಜಮಲ್ ಪ್ರಶ್ನಿಸಿದ್ದರು. ಅಷ್ಟಕ್ಕೆ ಮನಸ್ತಾಪ ಉಂಟಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಇದೇ 27ರಂದು ಜಮಲ್ ವಾಸವಿದ್ದ ಜೋಪಡಿಗೆ ನುಗ್ಗಿದ್ದ ಮೀರಾಜ್ ಹಾಗೂ ಸಹಚರರು ಹಲ್ಲೆ ಮಾಡಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ಜಮಲ್ ಆಸ್ಪ‍ತ್ರೆಗೆ ಹೋಗುವ ಮಾರ್ಗದಲ್ಲಿ ಮೃತಪಟ್ಟಿದ್ದರು’ ಎಂದರು.

ಜಮಲ್ ಪತ್ನಿ ದೂರು ನೀಡಿದ್ದಾರೆ. ಮೀರಾಜ್, ಇಬ್ರಾಹಿಂ, ಶಂಶು ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.