ADVERTISEMENT

ಬಿಕ್ಲು ಶಿವನ ಕೊಲೆ: ಸುಪಾರಿ ಪಡೆದವರ ಸೆರೆ

ಪ್ರಕರಣದ ತನಿಖೆ ಚುರುಕುಗೊಳಿಸಿದ ಭಾರತಿನಗರ ಠಾಣೆಯ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 15:37 IST
Last Updated 22 ಜುಲೈ 2025, 15:37 IST
ಅವಿನಾಶ್
ಅವಿನಾಶ್   

ಬೆಂಗಳೂರು: ರೌಡಿ ಶೀಟರ್ ಶಿವ ಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವ ಅವರ ಕೊಲೆಗೆ ಸುಪಾರಿ ಪಡೆದಿದ್ದ ಕಾಲೇಜು ವಿದ್ಯಾರ್ಥಿಯೂ ಸೇರಿದಂತೆ ನಾಲ್ವರನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಕೋಲಾರ ಜಿಲ್ಲೆ ಮಾಲೂರಿನ ಅವಿನಾಶ್ ದೀನಹಳ್ಳಿ, ಸುದರ್ಶನ್‌, ಮುರುಗೇಶ್ ಹಾಗೂ ನರಸಿಂಹ ಬಂಧಿತರು. 

ಎಸಿಪಿ ರಂಗಪ್ಪ ಅವರ ನೇತೃತ್ವದ ತಂಡವು ಮಾಲೂರು ತಾಲ್ಲೂಕಿನ ದೀನಹಳ್ಳಿಯಲ್ಲಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಿಕ್ಲು ಶಿವ ಕೊಲೆಗೆ ಆರೋಪಿಗಳು ₹1.50 ಲಕ್ಷಕ್ಕೆ ಸುಪಾರಿ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ನರಸಿಂಹ ತಂಡದ ನೇತೃತ್ವ ವಹಿಸಿದ್ದರು. ಬಂಧಿತ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

‘ವಿಮಲ್‌ ಮೂಲಕ ಆರೋಪಿಗಳು ಸುಪಾರಿ ಪಡೆದುಕೊಂಡಿದ್ದರು. ನರಸಿಂಹ ತನ್ನ ಪರಿಯಸ್ಥರನ್ನೂ ಕೃತ್ಯಕ್ಕೆ ಬಳಸಿಕೊಂಡಿದ್ದರು. ಹೆಲ್ಮೆಟ್‌ ಧರಿಸಿಕೊಂಡು ಬೈಕ್‌ನಲ್ಲಿ ಬಂದಿದ್ದ ಆರೋಪಿಗಳು ಕೃತ್ಯ ಎಸಗಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾಲೂರು ಕಾಲೇಜೊಂದರ ವಿದ್ಯಾರ್ಥಿ ನರಸಿಂಹ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿಗಳ  ಮುಖಚಹರೆ ಪತ್ತೆಯಾಗಿತ್ತು. ಆ ದೃಶ್ಯಾವಳಿ ಆಧರಿಸಿ ಸುಪಾರಿ ಪಡೆದವರನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ನರಸಿಂಹನಿಗೆ ರೌಡಿಗಳ ನಂಟು: ‘ಕಾಲೇಜು ವಿದ್ಯಾರ್ಥಿ ನರಸಿಂಹ ಅವರಿಗೆ ರೌಡಿಗಳ ಸಂಪರ್ಕ ಇರುವುದು ಕಂಡುಬಂದಿದೆ. ರೌಡಿಗಳ ಜನ್ಮದಿನಾಚರಣೆಗೆ ನರಸಿಂಹ ಬಂದು ಶುಭಾಶಯ ಕೋರಿ ಹೋಗುತ್ತಿದ್ದರು. ಹೀಗಾಗಿ ರೌಡಿಗಳ ಸಂಪರ್ಕ ಇರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಿಕ್ಲು ಶಿವ ಅವರ ಕೊಲೆಗೂ ಮುಂಚೆ ಆರೋಪಿಗಳು ಪುಲಿಕೇಶಿನಗರದ ಬಾರ್‌ವೊಂದರಲ್ಲಿ ಪಾರ್ಟಿ ನಡೆಸಿದ್ದರು. ಸ್ಯಾಮ್ಯುವೆಲ್‌ ನೀಡಿದ್ದ ಮಾಹಿತಿ ಆಧರಿಸಿ, ಬಿಕ್ಲು ಶಿವ ಅವರು ನಿಂತಿದ್ದ ಸ್ಥಳಕ್ಕೆ ಆರೋಪಿಗಳು ಕಾರು ಹಾಗೂ ಬೈಕ್‌ನಲ್ಲಿ ಬಂದಿದ್ದರು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ನರಸಿಂಹ 
ಸುದರ್ಶನ್‌
ಮುರುಗೇಶ್
ಪ್ರಕರಣದ ಮೊದಲನೇ ಆರೋಪಿಗಾಗಿ ಹುಡುಕಾಟ ನಡೆದಿದೆ. ಆತನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಲಿದ್ದಾರೆ. ಕಾರ್ಯಾಚರಣೆ ಹಾಗೂ ತನಿಖಾ ಹಂತವನ್ನು ಬಹಿರಂಗ ಪಡಿಸಲು ಆಗುವುದಿಲ್ಲ
– ಜಿ.ಪರಮೇಶ್ವರ ಗೃಹ ಸಚಿವ

ಮತ್ತೆ ಶಾಸಕರ ವಿಚಾರಣೆ? ಈ ಪ್ರಕರಣದಲ್ಲಿ ಕೆಆರ್ ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಅವರು ಐದನೇ ಆರೋಪಿ ಆಗಿದ್ದಾರೆ. ಹೈಕೋರ್ಟ್‌ ಸೂಚನೆಯಂತೆ ಭೈರತಿ ಬಸವರಾಜ್ ಅವರು ಶನಿವಾರ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದು ಬುಧವಾರ ಭಾರತಿನಗರ ಠಾಣೆಗೆ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.