ADVERTISEMENT

ಪಾರ್ಕಿಂಗ್‌ ಜಾಗಕ್ಕಾಗಿ ಜಗಳ: ಆಟೊ ಚಾಲಕನ ಹತ್ಯೆಯಲ್ಲಿ ಕೊನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
ಕಾರ್ತಿಕ್
ಕಾರ್ತಿಕ್   

ಬೆಂಗಳೂರು: ಆಟೊ ನಿಲ್ಲಿಸುವ ವಿಚಾರಕ್ಕೆ ಜಗಳವಾಗಿ ಮೂವರು ಪಾನಮತ್ತರು ಆಟೊ ಚಾಲಕ ಶ್ರೀರಾಮ್ (63) ಅವರನ್ನು ಗೋಡೆಗೆ ತಲೆ ಗುದ್ದಿಸಿ ಹತ್ಯೆಗೈದಿದ್ದಾರೆ.

ಡಾ.ರಾಜ್‌ಕುಮಾರ್ ರಸ್ತೆಯ ಜುಗನಹಳ್ಳಿಯಲ್ಲಿ ಗುರುವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಓಕಳೀಪುರದ ಕಾರ್ತಿಕ್, ಮೂಡಲಪಾಳ್ಯದ ರಾಜಶೇಖರ್ ಹಾಗೂ ಜನಾರ್ದನ್ ಎಂಬುವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಕುಟುಂಬ ಸದಸ್ಯರ ಜತೆ ಪ್ರಕಾಶ್‌ನಗರದಲ್ಲಿ ನೆಲೆಸಿದ್ದ ಶ್ರೀರಾಮ್, ಸುರೇಶ್ ಎಂಬುವರಿಗೆ ಸೇರಿದ ಸರಕು ಸಾಗಣೆ ಆಟೊ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ದಿನದ ಬಾಡಿಗೆ ಮುಗಿಸಿ, ಆಟೊ ನಿಲ್ಲಿಸಲು ಎಂದಿನಂತೆ ಜುಗನಹಳ್ಳಿಗೆ ಬಂದಿದ್ದರು.

ADVERTISEMENT

ಇದೇ ವೇಳೆ ಆರೋಪಿಗಳು ಹತ್ತಿರದ ‘ನವರಂಗ್ ಬಾರ್‌’ನಿಂದ ಹೊರಬಂದು ರಸ್ತೆ ಬದಿ ಮಾತನಾಡುತ್ತ ನಿಂತಿದ್ದರು. ಆಗ ಹಾರ್ನ್ ಮಾಡಿ ಅವರನ್ನು ಕರೆದ ಶ್ರೀರಾಮ್, ‘ಸ್ವಲ್ಪ ಪಕ್ಕಕ್ಕೆ ಹೋಗಿ. ಆಟೊ ನಿಲ್ಲಿಸಬೇಕು’ ಎಂದು ಸೂಚಿಸಿದರು. ಕುಡಿದ ಅಮಲಿನಲ್ಲಿದ್ದ ಆರೋಪಿಗಳು, ‘ನಮಗೆ ಸೈಡಿಗೆ ಹೋಗು ಎನ್ನಲು ನೀನ್ಯಾರೋ’ ಎನ್ನುತ್ತ ಗಲಾಟೆ ಪ್ರಾರಂಭಿಸಿದ್ದರು.

ಈ ಹಂತದಲ್ಲಿ ಕಾರ್ತಿಕ್, ಶ್ರೀರಾಮ್ ಅವರ ಕೆನ್ನೆಗೆ ಹೊಡೆದಿದ್ದಾನೆ. ಅದಕ್ಕೆ ಪ್ರತಿಯಾಗಿ ಅವರೂ ಆಟೊದಲ್ಲಿದ್ದ ಸ್ಕ್ರೂಡ್ರೈವರ್‌ ತೆಗೆದುಕೊಂಡು ಆತನ ತಲೆಗೆ ಬಾರಿಸಿದ್ದಾರೆ. ಗೆಳೆಯನಿಗೆ ಹೊಡೆದಿದ್ದರಿಂದ ಸಿಟ್ಟಾದ ಉಳಿದಿಬ್ಬರು, ಚಾಲಕನನ್ನು ಹಿಡಿದುಕೊಂಡು ಮನಸೋಇಚ್ಛೆ ಥಳಿಸಿದ್ದಾರೆ. ನಂತರ ಸಮೀಪ‍ದ ಕಟ್ಟಡದ ಗೋಡೆಗೆ ತಲೆ ಗುದ್ದಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಶ್ರೀರಾಮ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ಠಾಣೆ ಸನಿಹದಲ್ಲೇ ಹತ್ಯೆ: ರಾಜಾಜಿನಗರ ಠಾಣೆಯಿಂದ ಸುಮಾರು 300 ಮೀಟರ್ ದೂರದಲ್ಲೇ ಈ ಘಟನೆ ನಡೆದಿದ್ದು, ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಅರ್ಧ ತಾಸಿನಲ್ಲೇ ಪೊಲೀಸರು ಬಂಧಿಸಿದ್ದಾರೆ.
**
ಆಸ್ಪತ್ರೆಯಲ್ಲಿ ಸಿಕ್ಕ ಹಂತಕ
‘ಬಾರ್‌ ನೌಕರರನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ಯಾರೆಂದು ಗೊತ್ತಾಯಿತು. ಗಲಾಟೆಯಲ್ಲಿ ಒಬ್ಬ ಆರೋಪಿಗೂ ಗಾಯವಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದರು. ಕೂಡಲೇ ಸಮೀಪದ ಆಸ್ಪತ್ರೆಗಳಲ್ಲಿ ಹಂತಕರಿಗಾಗಿ ಜಾಲಾಡಿದೆವು. ಆಗ ಸುಗುಣ ಆಸ್ಪತ್ರೆಯಲ್ಲಿ ಕಾರ್ತಿಕ್ ಸಿಕ್ಕಿಬಿದ್ದ. ಆತನಿಂದ ಕರೆ ಮಾಡಿಸಿ, ಉಳಿದಿಬ್ಬರನ್ನು ಪಕ್ಕದ ರಸ್ತೆಯಲ್ಲೇ ಬಂಧಿಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಶ್ರೀರಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.