ADVERTISEMENT

ಪತ್ನಿಯ ಕೊಲೆ ಮಾಡಿ ದ್ವಿಚಕ್ರ ವಾಹನದಲ್ಲಿ ಶವ ಸಾಗಿಸಿದರು!

ಪತ್ನಿ ‘ನಾಪತ್ತೆ’ ದೂರು ಕೊಟ್ಟು ಸಿಕ್ಕಿಬಿದ್ದ: ನೆರವಾದ ಪತಿ ಅಣ್ಣನಿಗೂ ಜೈಲು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:22 IST
Last Updated 18 ಆಗಸ್ಟ್ 2019, 20:22 IST
   

ಬೆಂಗಳೂರು: ಕೌಟುಂಬಿಕ ಕಲಹದ ಕಾರಣಕ್ಕೆ ಪತ್ನಿಯ ಕತ್ತು ಹಿಸುಕಿ ಕೊಂದಿದ್ದ ಪತಿ,ಮೃತದೇಹವನ್ನು ಅಣ್ಣನ ನೆರವು ಪಡೆದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಕೃತ್ಯ ಕೊತ್ತನೂರಿನಲ್ಲಿ ಬಯಲಿಗೆ ಬಂದಿದೆ.

ಕೊತ್ತನೂರು ಬಸ್‌ ನಿಲ್ದಾಣ ಬಳಿಯ ದುರ್ಗಾ ಲೇಔಟ್‌ನ ಶಿಲ್ಪಾ (21) ಕೊಲೆಯಾದವರು.ಆಕೆಯ ಪತಿ ಕಲ್ಲೇಶ (31) ಮತ್ತು ಕಲ್ಲೇಶನ ಅಣ್ಣ, ಅಂಜನಪ್ಪ ಲೇಔಟ್‌ ನಿವಾಸಿ ಕೃಷ್ಣಪ್ಪ (33) ಎಂಬವರನ್ನು ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ: ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಕಲ್ಲೇಶ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ನಿವಾಸಿ ಶಿಲ್ಪಾ ಅವರನ್ನು ಒಂದು ವರ್ಷ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ. ದುರ್ಗಾ ಲೇಔಟ್‌ನಲ್ಲಿ ಬಾಡಿಗೆಯ ಮನೆಯಲ್ಲಿದಂಪತಿ ನೆಲೆಸಿದ್ದರು.

ADVERTISEMENT

ದಂಪತಿ ನಡುವೆ ಆರಂಭದಲ್ಲಿ ಅನ್ಯೋನ್ಯತೆಯಿತ್ತು. ವಯಸ್ಸಿನ ಅಂತರದ ವಿಷಯದಲ್ಲಿ ಇಬ್ಬರ ಮಧ್ಯೆ ನಂತರ ಜಗಳ ಶುರುವಾಗಿತ್ತು. ಇದರಿಂದ ಶಿಲ್ಪಾ ಆಗಾಗ್ಗೆ ತವರು ಮನೆಗೆ ಹೋಗಿ ಬರುತ್ತಿದ್ದಳು. ಎಸ್‌ಎಸ್‌ಎಲ್‌ಸಿವರೆಗೆ ಕಲಿತಿದ್ದ ಶಿಲ್ಪಾ, ಕೆಲಸಕ್ಕೆ ಹೋಗುವುದಾಗಿ ಹಠ ಹಿಡಿದಿದ್ದರು. ಅದಕ್ಕೆ ಕಲ್ಲೇಶ ಒಪ್ಪಿರಲಿಲ್ಲ. ಇದೂ, ಜಗಳಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದರು. ಪತಿಯ ಮಾತನ್ನು ಕಡೆಗಣಿಸಿದ ಪತ್ನಿ ಹೋಟೆಲೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಒಂದು ತಿಂಗಳು ಕೆಲಸ ಮಾಡಿದ್ದರು. ಸಂಬಳದ ಹಣವನ್ನು ಕೊಡುವಂತೆ ಕಲ್ಲೇಶ, ಆ. 12ರಂದು ಕೇಳಿದ್ದಾನೆ. ಅದಕ್ಕೆ ಆಕೆ ಒಪ್ಪಿರಲಿಲ್ಲ. ಇಬ್ಬರ ಮಧ್ಯೆ ಜಗಳ ತಾರಕಕ್ಕೇರಿ, ಅಕ್ಕಪಕ್ಕದ ಮನೆಯವರು ಇಬ್ಬರನ್ನೂ ಸಮಾಧಾನಪಡಿಸಿದ್ದರು.

ಪತ್ನಿಯ ವರ್ತನೆಯಿಂದ ಸಿಟ್ಟಾಗಿದ್ದ ಕಲ್ಲೇಶ, ಅದೇ ದಿನ ರಾತ್ರಿ 2 ಗಂಟೆ ಸುಮಾರಿಗೆ ನಿದ್ರೆಯಲ್ಲಿದ್ದ ಪತ್ನಿಯ ಕತ್ತು ಹಿಸುಕಿ, ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ, ಪಕ್ಕದ ಲೇಔಟ್‌ನಲ್ಲಿ ವಾಸವಿದ್ದ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದ. ಇಬ್ಬರೂ ಸೇರಿ, ಕಲ್ಲೇಶನ ದ್ವಿಚಕ್ರ ವಾಹನದಲ್ಲಿ ಒಯ್ದು ಕೊತ್ತನೂರು ಹೊರವಲಯದಲ್ಲಿ ಶವ ಹೂತುಹಾಕಿದ್ದರು.

ಶಿಲ್ಪಾ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅಕ್ಕ, ಚಿಕ್ಕಮ್ಮನಿಗೆ ಶಿಲ್ಪಾ ನಾಪತ್ತೆ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದ. ದಂಪತಿ ನಡುವೆ ಆಗಾಗ ಜಗಳ ಆಗುತ್ತಿದ್ದುದು ಮತ್ತು ಮಗಳು ಮನೆ ಬಿಟ್ಟು ಹೋಗುತ್ತಿದ್ದುದರಿಂದ, ಇದನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಪೊಲೀಸರಿಗೆ ದೂರು ನೀಡಲು ಇಬ್ಬರೂ ಸಲಹೆ ನೀಡಿದ್ದರು. ಆದರೆ, ದೂರು ಕೊಡಲು ಧೈರ್ಯ ಇಲ್ಲದೆ ಕಲ್ಲೇಶ ಸುಮ್ಮನಾಗಿದ್ದ ಎಂದೂ ಪೊಲೀಸರು ಹೇಳಿದರು.

ಐದು ದಿನ ಕಳೆದರೂ ಶಿಲ್ಪಾ ಪತ್ತೆ ಆಗದಿದ್ದರಿಂದ ಅಕ್ಕ ಮತ್ತು ಚಿಕ್ಕಮ್ಮ ಕೂಡ್ಲಿಗಿಯಿಂದ ಕೊತ್ತನೂರಿಗೆ ಬಂದಿದ್ದರು. ಆಕೆ ಕಾಣೆಯಾಗಿದ್ದಾಳೆ ಎಂದು ಕಲ್ಲೇಶ ಪುನರುಚ್ಚರಿಸಿದ್ದ. ಬಳಿಕ ಎಲ್ಲರೂ ಸೇರಿ ಕೊತ್ತನೂರು ಠಾಣೆಗೆ ಬಂದು ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಕೊತ್ತನೂರು ಠಾಣೆಯ ಇನ್‌ಸ್ಪೆಕ್ಟರ್‌ ಸುಬ್ರಹ್ಮಣ್ಯ ಸ್ವಾಮಿ, ಶಂಕೆಯ ಮೇಲೆ ಕಲ್ಲೇಶನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಸಹಾಯ ಮಾಡಿದ ಕಲ್ಲೇಶನ ಅಣ್ಣ ಕೃಷ್ಣಪ್ಪನನ್ನೂ ಹಿಂದೆಯೇ ಬಂಧಿಸಲಾಯಿತು ಎಂದು ಡಿಸಿಪಿ (ಈಶಾನ್ಯ) ಭೀಮಾಶಂಕರ ಗುಳೇದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.