ADVERTISEMENT

‘ಸಂಗೀತದ ಹುಚ್ಚು ಹಿಡಿಸಿದ್ದು ಪಂ. ರವಿಶಂಕರ್‌’

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್‌ ತಾರಾನಾಥ್‌ ಅವರಿಗೆ ರಾಷ್ಟ್ರೀಯ ಪುರಸ್ಕಾರ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 20:53 IST
Last Updated 21 ಡಿಸೆಂಬರ್ 2020, 20:53 IST
ಶ್ರೀರಾಮ ಸೇವಾ ಮಂಡಲಿ ಟ್ರಸ್ಟ್ ವತಿಯಿಂದ ಎಸ್.ವಿ.ನಾರಾಯಣಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪುರಸ್ಕಾರವನ್ನು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಪಂಡಿತ್ ರಾಜೀವ್ ತಾರನಾಥ ಅವರಿಗೆ ಸೋಮವಾರ ಅವರ ಮೈಸೂರಿನ ನಿವಾಸದಲ್ಲಿ ಪ್ರದಾನ ಮಾಡಿದರು. ಸಂಸದ ಕೆ.ಸಿ.ರಾಮಮೂರ್ತಿ, ಸಂಗೀತ ವಿದ್ವಾಂಸ ಮೈಸೂರು ಎಂ ಮಂಜುನಾಥ್ ಇದ್ದಾರೆ. PHOTO BY B R SAVITHA
ಶ್ರೀರಾಮ ಸೇವಾ ಮಂಡಲಿ ಟ್ರಸ್ಟ್ ವತಿಯಿಂದ ಎಸ್.ವಿ.ನಾರಾಯಣಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪುರಸ್ಕಾರವನ್ನು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಪಂಡಿತ್ ರಾಜೀವ್ ತಾರನಾಥ ಅವರಿಗೆ ಸೋಮವಾರ ಅವರ ಮೈಸೂರಿನ ನಿವಾಸದಲ್ಲಿ ಪ್ರದಾನ ಮಾಡಿದರು. ಸಂಸದ ಕೆ.ಸಿ.ರಾಮಮೂರ್ತಿ, ಸಂಗೀತ ವಿದ್ವಾಂಸ ಮೈಸೂರು ಎಂ ಮಂಜುನಾಥ್ ಇದ್ದಾರೆ. PHOTO BY B R SAVITHA   

ಮೈಸೂರು: ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಬೆಂಗಳೂರಿನ ಶ್ರೀ ರಾಮ ಸೇವಾ ಮಂಡಲಿ ಟ್ರಸ್ಟ್ ವತಿಯಿಂದ ಸೋಮವಾರ ‘ಎಸ್.ವಿ.ನಾರಾಯಣ ಸ್ವಾಮಿ ರಾವ್ ಸ್ಮಾರಕ ರಾಷ್ಟ್ರೀಯ ಪುರಸ್ಕಾರ–2020‘ ಪ್ರದಾನ ಮಾಡಲಾಯಿತು.

ರಾಜೀವ್‌ ತಾರಾನಾಥ್‌ ನಿವಾಸದಲ್ಲೇ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ, ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

₹ 50 ಸಾವಿರ, ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜೀವ್‌ ತಾರಾನಾಥ್‌, ‘ಎಡಗೈ, ಬಲಗೈ ಯಾವುದು ಎಂದು ಗೊತ್ತಾಗದ ವಯಸ್ಸಿನಲ್ಲೇ ನನ್ನ ಅಪ್ಪ ಪಂಡಿತ್‌ ತಾರಾನಾಥ್‌ ನನಗೆ ಸಂಗೀತದ ಗೀಳು ಹಿಡಿಸಿದರು. ಅವರು ಬಲಗೈಲಿ ತಬಲಾ ಬಾರಿಸಿದರೆ, ನಾನು ಎಡಗೈನಲ್ಲಿ ಬಾರಿಸುತ್ತಿದ್ದೆ‌‌’ ಎಂದರು.

‘ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂದಿದ್ದ ನಾನು ಒಮ್ಮೆ ಬೆಂಗಳೂರಿನ ಪುರಭವನದಲ್ಲಿ ಪಂಡಿತ್‌ ರವಿಶಂಕರ್‌ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಕಾರ್ಯಕ್ರಮನನ್ನನ್ನು ಸಂಗೀತ ಲೋಕದ ಹುಚ್ಚನನ್ನಾಗಿಸಿತು’ ಎಂದು ನೆನಪು ಹಂಚಿಕೊಂಡರು.

‘ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಎಂಬುದು ಮೈಸೂರಿನಲ್ಲಿದೆ. ಆದರೆ, 10 ವರ್ಷಗಳಿಂದ ಇಲ್ಲಿ ಏನೂ ನಡೆದಿಲ್ಲ. ಫೈನ್‌ ಆರ್ಟ್ಸ್‌ ಕಾಲೇಜಿನ ಬೋರ್ಡ್‌ನ ಬಣ್ಣವೇ ಮಾಸಿ ಹೋಗಿದೆ’ ಎಂದು ಟೀಕಿಸಿದರು.

ವಯಲಿನ್‌ ಕಲಾವಿದ ಮೈಸೂರು ಮಂಜುನಾಥ್ ಮಾತನಾಡಿ, ‘ವಿಶ್ವದಲ್ಲಿರುವ ಸಾವಿರಾರು ಸಂಗೀತಪ್ರಕಾರಗಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ವಿಶಿಷ್ಟ ಸ್ಥಾನವಿದೆ. ಇಂಥ ಸಂಗೀತವನ್ನು ರಾಮನವಮಿ ಜೊತೆ ತಳಕು ಹಾಕಿ ಹಲವು ದಶಕಗಳಿಂದ ವರ್ಷಗಳಿಂದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ. ಇದರ ಶ್ರೇಯ ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಅವರಿಗೆ ಸಲ್ಲಬೇಕು. ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯು ಸಾಂಸ್ಕೃತಿಕ ವಲಯದಲ್ಲೇ ಉತ್ಕೃಷ್ಟವಾದದು. ಈ ಪ್ರಶಸ್ತಿಯು ಈಗ ವಿಶ್ವಮಟ್ಟದ ಕಲಾವಿದ ರಾಜೀವ್‌ ತಾರಾನಾಥ್‌ ಅವರಿಗೆ ಒಲಿದಿದೆ’ ಎಂದರು.

‘ಪಂಡಿತರ ಸಂಗೀತವು ಧರ್ಮಾತೀತ, ಭಾಷಾತೀತ ಹಾಗೂ ಎಲ್ಲರಿಗೂ ಆಪ್ಯಾಯಮಾನವಾಗಿರುವಂಥದ್ದು. ಮೈಸೂರಿಗೆ ಸಾಂಸ್ಕೃತಿಕ ರಾಜಧಾನಿ ಎಂಬ ಗೌರವ ತಂದುಕೊಟ್ಟವರಲ್ಲಿ ರಾಜೀವ್‌ ತಾರಾನಾಥ್‌ ಕೂಡ ಒಬ್ಬರು. ಅವರ ರಕ್ತದ ಕಣಗಳಲ್ಲೇ ಸಂಗೀತ ತುಂಬಿಕೊಂಡಿದೆ’ ಎಂದು ಶ್ಲಾಘಿಸಿದರು.

ಸಂಗೀತ ವಿದ್ವಾಂಸ ಇಂದೂಧರ‌ ನಿರೋಡಿ, ಶ್ರೀ ರಾಮಸೇವಾ ಮಂಡಲಿ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ರಾಂಪ್ರಸಾದ್‌, ಟ್ರಸ್ಟಿ ಹಾಗೂ ನಟ ಶಿವರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.