.jpg?w=900&q=70&auto=format,compress)
ಸಾಂದರ್ಭಿಕ ಚಿತ್ರ
ಬೆಂಗಳೂರು: ‘ರಾಜಸ್ಥಾನದ ಜೈಪುರದಿಂದ ರೈಲಿನಲ್ಲಿ ಬೆಂಗಳೂರಿಗೆ ಪೂರೈಕೆಯಾಗಿರುವುದು ನಾಯಿ ಮಾಂಸವಲ್ಲ, ಅದು ಕುರಿ ಮಾಂಸ ಎನ್ನುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜುಲೈ 26ರ ರಾತ್ರಿ ಜೈಪುರ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ನಗರಕ್ಕೆ ಸುಮಾರು 4,500 ಕೆ.ಜಿ.ಯಷ್ಟು ಮಾಂಸ ತರಲಾಗಿತ್ತು. ಇದನ್ನು ಅಬ್ದುಲ್ ರಜಾಕ್ ಎಂಬುವರು ತರಿಸಿದ್ದರು. ಇದು ನಾಯಿ ಮಾಂಸ ಎಂದು ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಆರೋಪಿಸಿದ್ದರು. ಬಳಿಕ ಮಾಂಸದ ಮಾದರಿಗಳನ್ನು ಪರೀಕ್ಷೆಗಾಗಿ ಹೈದರಬಾದ್‌ನ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಅಧೀನದಲ್ಲಿರುವ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆಯ (ಎನ್‌ಎಂಆರ್‌ಐ) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಲಾದ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಎಲ್ಲವೂ ಕುರಿ ಮಾಂಸ ಎನ್ನುವುದು ಖಚಿತಪಟ್ಟಿದೆ’ ಎಂದು ಹೇಳಿದರು.
‘ಮಾಂಸದ ಶುಚಿತ್ವ ಮತ್ತು ಅದರಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಂಬಂಧಿಸಿದಂತೆಯೂ ಮಾದರಿಗಳನ್ನು ಸೂಕ್ಷ್ಮಾಣು ಜೀವವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ನೀಡಲಾಗಿದೆ. ಈ ಪರೀಕ್ಷೆಯ ವರದಿ ಬರಬೇಕಿದೆ. ಬಳಿಕ ಈ ಮಾಂಸ ತಿನ್ನಲು ಯೋಗ್ಯವೆ? ರಾಸಾಯನಿಕಗಳನ್ನು ಬಳಸಲಾಗಿದೆಯೆ? ಎಂಬುದರ ಬಗ್ಗೆ ಸ್ಪಷ್ಟತೆ ದೊರೆಯಲಿದೆ. ಈ ವರದಿ ಎರಡರಿಂದ ಮೂರು ದಿನಗಳಲ್ಲಿ ದೊರೆಯಬಹುದು’ ಎಂದು ತಿಳಿಸಿದರು.
‘ಈ ಮಾಂಸ ತರಿಸಿದ್ದ ಅಬ್ದುಲ್ ರಜಾಕ್ ಅವರು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮಾರ್ಗಸೂಚಿ ಅನ್ವಯ ಅಗತ್ಯ ದಾಖಲೆ ಹೊಂದಿದ್ದಾರೆ. ಪಶ್ವಿಮ ಬಂಗಾಳ, ಗುಜರಾತ್, ರಾಜಸ್ಥಾನದಿಂದ ಇಲ್ಲಿಗೆ ಮಾಂಸ ತರಿಸಲಾಗುತ್ತಿದೆ. ರಾಜಸ್ಥಾನದಿಂದ ಮಾಂಸ ತರಿಸಲು ಒಂಬತ್ತು ಮಂದಿ ಪರವಾನಗಿ ಹೊಂದಿದ್ದಾರೆ. ಬೇರೆ ರಾಜ್ಯಗಳಿಂದ ಮಾಂಸ ತರಿಸಲು ಎಷ್ಟು ಮಂದಿ ಪರವಾನಗಿ ಪಡೆದಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.