
ಬೆಂಗಳೂರು: ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ಹಿಂದೂ ದೇವಾಲಯಗಳ ಪೂಜಾ ಸಾಮಗ್ರಿಗಳ ವೆಚ್ಚಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಮುಖ್ಯ ಪ್ರಾಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್, ನಿಯೋಗವು ಮಂಗಳವಾರ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಪತ್ರ ಸಲ್ಲಿಸಲಾಯಿತು ಎಂದು ತಿಳಿಸಿದ್ದಾರೆ.
‘ಸಿ’ ವರ್ಗದ 36 ಸಾವಿರ ದೇವಸ್ಥಾನಗಳ ಪೂಜಾ ಸಾಮಗ್ರಿಗಳು, ವಿದ್ಯುತ್ ವೆಚ್ಚ, ನಿತ್ಯ ಎರಡು ಬಾರಿ ಪೂಜೆ ಮಾಡಲು ಮುಜರಾಯಿ ಇಲಾಖೆ ಮೂಲಕ ಮಾಸಿಕ ₹6 ಸಾವಿರ ಹಣ ನೀಡಲಾಗುತ್ತಿದೆ. ಅದನ್ನು ₹10 ಸಾವಿರಕ್ಕೆ ಏರಿಸುವಂತೆ ಮನವಿ ಮಾಡಲಾಯಿತು’ ಎಂದು ತಿಳಿಸಿದ್ದಾರೆ.
‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಪೂಜಾ ಸಾಮಗ್ರಿಗಳ ವೆಚ್ಚದಲ್ಲಿ ಶೇ 35ರಷ್ಟು ಪಾಲನ್ನು ಇಲಾಖೆ ಭರಿಸುತ್ತಿದೆ. ಅದನ್ನು ಶೇ 50ಕ್ಕೆ ಹೆಚ್ಚಿಸುವಂತೆ ಮನವಿ ಮಾಡಲಾಯಿತು. ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.