ADVERTISEMENT

ಭಾರತದಲ್ಲಿ ಶೇ 23ರಷ್ಟು ಶಾಲಾ ಮಕ್ಕಳಲ್ಲಿ ಸಮೀಪದೃಷ್ಟಿ ಸಮಸ್ಯೆ: ಎಸಿಒಐಎನ್‌

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:56 IST
Last Updated 26 ಮೇ 2025, 16:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಭಾರತದಲ್ಲಿ ಶೇ 23ರಷ್ಟು ಶಾಲಾ ಮಕ್ಕಳು ಸಮೀಪದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2050ರ ವೇಳೆಗೆ ಇದು ಶೇ 53 ತಲುಪುವ ಸಾಧ್ಯತೆ ಇದೆ ಎಂದು ಭಾರತದ ಸಮುದಾಯ ನೇತ್ರಶಾಸ್ತ್ರಜ್ಞರ ಸಂಘ (ಎಸಿಒಐಎನ್‌) ತಿಳಿಸಿದೆ.

ಮಕ್ಕಳಿಗೆ ತಮಗೆ ದೃಷ್ಟಿ ಸಮಸ್ಯೆ ಇದೆ ಎಂಬುದು ತಿಳಿದಿರುವುದಿಲ್ಲ. ಮಗುವಿಗೆ ಶಾಲೆಯಲ್ಲಿ ಓದಲು ಕಷ್ಟವಾದ ಮೇಲೆ ಪೋಷಕರಿಗೆ ಗೊತ್ತಾಗುತ್ತದೆ. ನಗರ ಪ್ರದೇಶಗಳಲ್ಲಿ ಮಕ್ಕಳಲ್ಲಿ ಸಮೀಪದೃಷ್ಟಿ ಹೆಚ್ಚಾಗುತ್ತಿದೆ ಎಂದು ಸಮೀಪದೃಷ್ಟಿ ಜಾಗೃತಿ ವಾರ ಆಚರಣೆಯಲ್ಲಿ ನೇತ್ರ ತಜ್ಞರು ತಿಳಿಸಿದ್ದಾರೆ.

ADVERTISEMENT

ರಾಜೀವ್‌ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಜರ್ನಲ್ ಅಧ್ಯಯನದ ಪ್ರಕಾರ, ‘ಗ್ರಾಮೀಣ ಪ್ರದೇಶಕ್ಕಿಂತ ನಗರಗಳಲ್ಲಿ ದೃಷ್ಟಿ ದೋಷ ಹೆಚ್ಚಿದೆ. ಬೆಂಗಳೂರಿನ ನಗರದಲ್ಲಿ 5ವರ್ಷದಿಂದ 8 ವರ್ಷ ವಯಸ್ಸಿನ ಮಕ್ಕಳಲ್ಲಿ ಸುಮಾರು ಶೇ 13, 9-15 ವಯೋಮಾನದವರಲ್ಲಿ ಶೇ 40 ಕ್ಕಿಂತ ಹೆಚ್ಚು ಮಕ್ಕಳು ಸಮೀಪ ದೃಷ್ಟಿಯಿಂದ ಬಳಲುತ್ತಿದ್ದಾರೆ’ ಎಂದು ನೇತ್ರತಜ್ಞರು ಮಾಹಿತಿ ನಿಡಿದ್ದಾರೆ.

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಪರದೆ ನೋಡುವುದರಲ್ಲಿ ಹೆಚ್ಚು ಸಮಯ ಕಳೆಯುವುದು, ಹೊರಾಂಗಣ ಆಟದಲ್ಲಿ ಕಡಿಮೆ ತೊಡಗಿಕೊಂಡಿರುವುದು ಇದಕ್ಕೆ ಮುಖ್ಯ ಕಾರಣ ಎಂದು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಅರುಣ್ ತಿಳಿಸಿದರು.

ಮಗು ತುಂಬಾ ಹತ್ತಿರದಿಂದ ಟಿ.ವಿ ನೋಡಲು ಪ್ರಾರಂಭಿಸಿದಾಗ, ಪುಸ್ತಕಗಳನ್ನು ಕಣ್ಣಿಗೆ ಹತ್ತಿರ ಹಿಡಿದಿಟ್ಟುಕೊಂಡು ಓದುವಾಗ, ಶಾಲೆಯಲ್ಲಿ ಬೋರ್ಡ್‌ಮೇಲೆ ಬರೆದಿದ್ದು ಕಾಣಿಸುತ್ತಿಲ್ಲ ಎಂದು ದೂರಿದಾಗ ಮಾತ್ರ ಸಮೀಪ ದೃಷ್ಟಿಯ ಚಿಹ್ನೆಗಳನ್ನು ಪೋಷಕರು ಗಮನಿಸುತ್ತಾರೆ. ಮಗುವಿಗೆ ಸಮಸ್ಯೆ ಆರಂಭವಾದಾಗಲೇ ಪತ್ತೆ ಹಚ್ಚಿದರೆ ಪರಿಹಾರ ಕಂಡುಕೊಳ್ಳುವುದು ಸುಲಭ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.