ADVERTISEMENT

ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ಮಾರ್ಗ ಆ.29ರಿಂದ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 20:44 IST
Last Updated 21 ಆಗಸ್ಟ್ 2021, 20:44 IST
   

ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ಮೆಟ್ರೋದಲ್ಲಿ ಸಂಚರಿಸುವ ನಿರೀಕ್ಷೆ ಆ.29ರಂದು ಕೈಗೂಡಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ಮಾರ್ಗದಲ್ಲಿ ಮೆಟ್ರೊ ರೈಲಿನ ವಾಣಿಜ್ಯ ಸೇವೆಗೆ ಚಾಲನೆ ಸಿಗಲಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 6.2 ಕಿ.ಮೀವರೆಗಿನ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

‘ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಆ.11 ಮತ್ತು 12ರಂದು ಈ ಮಾರ್ಗದ ಪರಿಶೀಲನೆ ನಡೆಸಿದ್ದರು. ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನೂ ನೀಡಿದ್ದರು. ಅವುಗಳನ್ನು ಪಾಲಿಸಲಾಗಿದೆ. ಕೇಂದ್ರ ನಗರಾಭಿವೃದ್ಧಿ ಸಚಿವರು ಮತ್ತು ಮುಖ್ಯಮಂತ್ರಿಯವರ ದಿನಾಂಕ ಕೋರಿ ಪತ್ರ ಬರೆಯಲಾಗಿತ್ತು. ಇಬ್ಬರು ಗಣ್ಯರು ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ. ಆ.29ರ ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ನಡೆಯಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಗರಿಷ್ಠ ಪ್ರಯಾಣ ದರ ₹56 ?:
ಉದ್ದೇಶಿತ ಮಾರ್ಗದಲ್ಲಿ ನಾಯಂಡಹಳ್ಳಿ ಮುಂದೆ ನಿರ್ಮಾಣವಾಗಲಿರುವ ಚಲ್ಲಘಟ್ಟ ನಿಲ್ದಾಣವೂ ಸೇರಿ ಒಟ್ಟು ಏಳು ನಿಲ್ದಾಣಗಳು ಇರಲಿದ್ದು, ನಿತ್ಯ 75 ಸಾವಿರ ಜನರಿಗೆ ಇದರಿಂದ ಅನುಕೂಲ ಆಗಲಿದೆ. ಸೇವೆಗೆ ಮುಕ್ತಗೊಂಡ ನಂತರ ನೇರಳೆ ಮಾರ್ಗದ (ಬೈಯಪ್ಪನಹಳ್ಳಿಯಿಂದ ಕೆಂಗೇರಿ) ಗರಿಷ್ಠ ಪ್ರಯಾಣ ದರ ಅಂದಾಜು ₹56 ಆಗುವ ಸಾಧ್ಯತೆ ಇದೆ.

ಹಲವು ಗಡುವು:
ಕೆಂಗೇರಿ ಮಾರ್ಗವು ಈಗಾಗಲೇ ಹಲವು ಗಡುವುಗಳನ್ನು ಮೀರಿದೆ. ವಾಸ್ತವವಾಗಿ 2018ರ ಡಿಸೆಂಬರ್‌ನಲ್ಲೇ ಇದು ಲೋಕಾರ್ಪಣೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ 2019ರ ಮಾರ್ಚ್‌ಗೆ ಮುಂದೂಡಲ್ಪಟ್ಟಿತ್ತು. ಅಲ್ಲಿಂದ 2019ರ ನವೆಂಬರ್, 2020ರ ಅಕ್ಟೋಬರ್, 2021ರ ಫೆಬ್ರುವರಿ, ಏಪ್ರಿಲ್, ಜೂನ್‌ಗೆ ಸೇವೆಗೆ ಮುಕ್ತಗೊಳಿಸುವ ಗುರಿ ಇತ್ತು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಮಾರ್ಗ ಪರಿಶೀಲನೆ ನಡೆಸಿದ್ದರು. 2021ರ ಜುಲೈನಲ್ಲಿ ಈ ಮಾರ್ಗವನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಆ ಸಂದರ್ಭದಲ್ಲಿ ಹೇಳಿತ್ತು. ಇದಾಗಿ ಒಂದು ತಿಂಗಳ ನಂತರ ‘ಮುಹೂರ್ತ’ ಕೂಡಿ ಬಂದಿದೆ.

Caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.