ADVERTISEMENT

ಮುಸ್ಲಿಮರಿಗೆ ದೊರಕದ ಅರ್ಹತೆಯ ಅವಕಾಶ: ಮುಜಾಫರ್ ಅಸ್ಸಾದಿ ಬೇಸರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:00 IST
Last Updated 17 ನವೆಂಬರ್ 2022, 21:00 IST

ಬೆಂಗಳೂರು: ಹಲವು ಮುಸ್ಲಿಮರು ಉತ್ತಮ ಶಿಕ್ಷಣ ಪಡೆದಿದ್ದರೂ, ಅರ್ಹತೆಗೆ ತಕ್ಕ ಅವಕಾಶಗಳು ದೊರೆತಿಲ್ಲ. ರಾಜಕೀಯ ಸ್ಥಾನಮಾನಗಳೂ ದೂರವೇ ಉಳಿದಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್‌ ಮುಜಾಫರ್ ಅಸ್ಸಾದಿ ತಮ್ಮ ಸಮುದಾಯದ ಸ್ಥಿತಿಗತಿ ತೆರೆದಿಟ್ಟರು.

ಸೆಂಟರ್ ಫಾರ್ ಸೆಕ್ಯುಲರ್ ಡೆಮಾಕ್ರಸಿ ಬಿ.ಎ. ಮೊಹಿದ್ದೀನ್‌ ಸ್ಮಾರಣಾರ್ಥ ‘ರಾಜ್ಯ ರಾಜಕಾರಣದಲ್ಲಿ ಮುಸ್ಲಿಮರು: ನಿನ್ನೆ–ಇಂದು–ನಾಳೆ’ ವಿಷಯ ಕುರಿತು ಗುರುವಾರ ಹಮ್ಮಿಕೊಂಡಿದ್ದಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶತಮಾನಗಳ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಇದುವರೆಗೂ ಒಬ್ಬ ಮುಸ್ಲಿಂ ಪ್ರಾಧ್ಯಾಪಕ ಕುಲಪತಿ ಹುದ್ದೆ ಅಲಂಕರಿಸಿಲ್ಲ. ಎಷ್ಟೋ ಅರ್ಹರು ಇದ್ದರೂ, ಸ್ಥಾನಮಾನ ನೀಡುವಾಗ ಪರಿಗಣಿಸಿಲ್ಲ.ಮೊಹಿದ್ದೀನ್‌ ಅವರು ಕುಲಪತಿ ಹುದ್ದೆ ಕೊಡಿಸಲು ಪ್ರಯತ್ನಿಸಿದರೂ, ಫಲ ಸಿಗಲಿಲ್ಲ. ಕಾಂಗ್ರೆಸ್‌ ಸೇರಿ ಯಾವ ರಾಜಕೀಯ ಪಕ್ಷಗಳೂ ಇಂತಹ ವಿಷಯಗಳ ಬಗ್ಗೆ ಗಮನ ಹರಿಸಿಲ್ಲ ಎಂದು ಬೇಸರ ತೋಡಿಕೊಂಡರು.

ADVERTISEMENT

ಕರ್ನಾಟಕ ಸಹಿಷ್ಣುತೆ ಇರುವ ರಾಜ್ಯ. ಹಿಂದೆ ಕೋಮು ಗಲಭೆಗಳು ನಡೆದಿದ್ದರೂ, ಸಮಾಜ ಶಾಂತಿ ಮರುಸ್ಥಾಪನೆಯಲ್ಲಿ ಎಲ್ಲರೂ ಶ್ರಮಿಸಿದ್ದಾರೆ. ಮಂಗಳೂರು ಸೇರಿದಂತೆ ಕೆಲ ಭಾಗಗಳಲ್ಲಿ ಪ್ರಕರಣಗಳು ಮರುಕಳಿಸಿದರೂ, ಬೆಂಗಳೂರು ಸೇರಿದಂತೆ ಬೇರೆ ಭಾಗಗಳಲ್ಲಿ ಸೌಹಾರ್ದತೆ ನೆಲೆಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಆರ್. ರಮೇಶ್ ಕುಮಾರ್, ‘ಮುಸ್ಲಿಮರು ಮತದಾನದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

ಕೆಲ ರಾಜಕಾರಣಿಗಳು ಮುಸ್ಲಿಮರ ಮತ ಪಡೆದು ಗೆಲವು ಪಡೆದಿದ್ದನ್ನು ಮರೆತಿದ್ದಾರೆ. ಮುಖಂಡರು ಸಮುದಾಯದ ಜನರನ್ನು ಜಾಗೃತಗೊಳಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಸಚಿವ ಬಿ.ಎಲ್. ಶಂಕರ್, ರಾಜಕೀಯ ವಿಶ್ಲೇಷಕ ಅತ್ಹರುಲ್ಲಾ ಶರೀಫ್, ಪತ್ರಕರ್ತ ಬಿ.ಎಂ. ಹನೀಫ್, ಎ.ಕೆ. ಮುಶ್ತಾಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.