
ಕೆಂಗೇರಿ ಬಸ್ ನಿಲ್ದಾಣದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ
ಪ್ರಜಾವಾಣಿ ಚಿತ್ರಗಳು: ಎಂ.ಎಸ್. ಮಂಜುನಾಥ್
ಬೆಂಗಳೂರು: ಮೈಸೂರು ರಸ್ತೆಯು ಬೆಂಗಳೂರು ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಒಂದು. ವಾಣಿಜ್ಯ ಸಂಕೀರ್ಣಗಳು, ವಸತಿ ಸಮುಚ್ಚಯಗಳು ಈ ಮಾರ್ಗದಲ್ಲಿ ತಲೆ ಎತ್ತಿದ್ದು, ಕಾರ್ಮಿಕರು ಮತ್ತು ಉದ್ಯೋಗಿಗಳ ಸಂಚಾರ ಹೆಚ್ಚಾಗಿದೆ. ಮೈಸೂರು, ಮಂಡ್ಯ, ಕೊಡಗಿನಿಂದ ನಗರಕ್ಕೆ ಬರುವವರಿಗೆ ಇದೇ ಪ್ರಮುಖ ಮಾರ್ಗ. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳ ಸಂಖ್ಯೆಯೂ ಅಧಿಕವಾಗಿದ್ದು, ವಿಪರೀತ ದಟ್ಟಣೆ ಉಂಟಾಗುತ್ತಿದೆ.
ಮೈಸೂರು ರಸ್ತೆಯ ಬಾಲಗಂಗಾಧರನಾಥ ಮೇಲ್ಸೇತುವೆ, ಮೈಸೂರು ರಸ್ತೆ ಟೋಲ್, ಗುಡ್ಡದಹಳ್ಳಿ, ಸ್ಯಾಟಲೈಟ್ ಬಸ್ ನಿಲ್ದಾಣ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ ಹಾಗೂ ಕೆಂಗೇರಿ ಬಸ್ ಟರ್ಮಿನಲ್ ಸಿಗ್ನಲ್‌ಗಳಲ್ಲಿ ವಿಪರೀತ ದಟ್ಟಣೆ ಆಗುತ್ತಿದೆ. ಅದರಲ್ಲೂ ವಾರಾಂತ್ಯ, ರಜಾ ದಿನಗಳು ಹಾಗೂ ದಟ್ಟಣೆ ಅವಧಿಯಾದ ಬೆಳಿಗ್ಗೆ 7ರಿಂದ 11, ಸಂಜೆ 4ರಿಂದ 8ರವರೆಗೆ ಈ ಮಾರ್ಗದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.
ಮೈಸೂರು ರಸ್ತೆಯಲ್ಲಿ ‘ಪ್ರಜಾವಾಣಿ’ ಪ್ರತಿನಿಧಿ ಸುತ್ತು ಹಾಕಿದಾಗ ಸಂಚಾರ ಸಮಸ್ಯೆಗಳು ಕಂಡುಬಂದವು.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಚಲ್ಲಘಟ್ಟದವರೆಗೆ 12 ಕಿ.ಮೀ ಇದೆ. ಈ ದೂರ ಕ್ರಮಿಸಲು 55 ನಿಮಿಷ ಬೇಕಾಗುತ್ತದೆ. ಅಂದಾಜು 30 ನಿಮಿಷದಲ್ಲಿ ಕ್ರಮಿಸಬಹುದಾದ ದೂರ ತಲುಪಲು ಒಂದು ತಾಸು ಟ್ರಾಫಿಕ್‌ನಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದ 24 ತಾಸು ಈ ಮಾರ್ಗದಲ್ಲಿ ವಾಹನ ಸಂಚಾರವಿದ್ದು, ಅದರಲ್ಲಿ ಎಂಟು ತಾಸು ದಟ್ಟಣೆಯಿಂದ ಕೂಡಿರುತ್ತದೆ. ಕೆಲವು ಜಂಕ್ಷನ್‌ಗಳನ್ನು ದಾಟುವುದಕ್ಕೆ ವಾಹನ ಸವಾರರು ಪ್ರತಿನಿತ್ಯ ಪರದಾಡಬೇಕಾದ ಪರಿಸ್ಥಿತಿಯಿದೆ.
ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಈ ರಸ್ತೆಗಳಲ್ಲಿ ಸಾಗುವುದೇ ಸವಾಲು. ಸಾಲುಗಟ್ಟಿ ನಿಲ್ಲುವ ವಾಹನಗಳು ಒಂದೆಡೆ, ಇನ್ನೊಂದೆಡೆ ಮಂದಗತಿಯಲ್ಲಿ ವಾಹನಗಳು ಚಲಿಸುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಖರೀದಿಗೆ ಬರುವ ಜನರು ಸಮಯಕ್ಕೆ ಸರಿಯಾಗಿ ಶಾಲೆ, ಕಚೇರಿ ಹಾಗೂ ಮನೆಗೆ ತಲುಪಲಾಗದೆ ಪರಿತಪಿಸುವಂತಾಗಿದೆ. ಸಂಚಾರ ದಟ್ಟಣೆಯಿಂದಾಗಿ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸುವುದೂ ಸವಾಲಾಗಿ ಪರಿಣಮಿಸಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಕೇರಳ, ತಮಿಳುನಾಡಿಗೆ ಬಸ್‌ಗಳು ಹೊರಡುತ್ತವೆ. ಓಣಂ, ಪೊಂಗಲ್ ಸಂದರ್ಭದಲ್ಲೂ ಪ್ರಯಾಣಿಕರ ಸಂಖ್ಯೆ ಅಧಿಕ. ಅಲ್ಲದೇ ನಿಲ್ದಾಣದ ಮುಂದೆ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುತ್ತವೆ.
ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಪ್ರಯಾಣಿಕರು ಹತ್ತುವಾಗ, ಇಳಿಯುವಾಗ ಆಟೊಗಳು, ಕ್ಯಾಬ್ ಸೇರಿ ಖಾಸಗಿ ವಾಹನಗಳು ಅಡ್ಡ ಬರುತ್ತಿವೆ. ಬಸ್ ಹತ್ತುವ ಆತುರದಲ್ಲಿರುವ ವಯಸ್ಕರು, ಮಹಿಳೆಯರು ಹಾಗೂ ಮಕ್ಕಳಿಗೆ ಖಾಸಗಿ ವಾಹನಗಳು ಡಿಕ್ಕಿ ಹೊಡೆದಿರುವ ಉದಾಹರಣೆಗಳೂ ಇವೆ.
ದಟ್ಟಣೆ ಅವಧಿಯಲ್ಲಿ ಬಾಪೂಜಿನಗರ ಜಂಕ್ಷನ್ ಬಂದ್ ಮಾಡಲಾಗುತ್ತದೆ. ಶಾಮಣ್ಣ ಗಾರ್ಡನ್, ಬಾಪೂಜಿ ನಗರಕ್ಕೆ ತೆರಳಬೇಕಾದವರು ಸುತ್ತುಹಾಕಿಕೊಂಡು ಹೋಗಬೇಕಾಗುತ್ತದೆ. ಇಲ್ಲಿ ಸ್ಕೈವಾಕ್ ನಿರ್ಮಿಸಿದ್ದರೂ ಜನರು ಬಳಸುವುದು ಕಡಿಮೆ. ರಸ್ತೆ ದಾಟುವುದೇ ಹೆಚ್ಚು. ಕೆಂಗೇರಿ ಬಸ್ ಟರ್ಮಿನಲ್ ಬಳಿಯೂ ಇದೇ ಸಮಸ್ಯೆ.
ಗಾಳಿ ಆಂಜನೇಯ ದೇವಸ್ಥಾನ ಬಳಿ ಶನಿವಾರ ಮತ್ತು ಅಮಾವಾಸ್ಯೆ ದಿನ ವಾಹನಗಳು ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ. ನಾಯಂಡಹಳ್ಳಿ ಕಡೆಯಿಂದ ಮೈಸೂರು ರಸ್ತೆಯಲ್ಲಿ ಬಿಎಚ್‌ಇಎಲ್ ಜಂಕ್ಷನ್ ಮೂಲಕ ಮೇಲ್ಸೇತುವೆಯಿಂದ ಗಾಳಿ ಆಂಜನೇಯ ದೇವಸ್ಥಾನದವರೆಗೆ ಏಕಮುಖ ಸಂಚಾರವಿದೆ. ಗಾಳಿ ಆಂಜನೇಯ ದೇವಸ್ಥಾನದಿಂದ ಬಿಎಚ್‌ಇಎಲ್ ಜಂಕ್ಷನ್‌ವರೆಗೂ ಏಕಮುಖ ಸಂಚಾರವಿದೆ. ಆದರೆ, ದೀಪಾಂಜಲಿ ನಗರದ ಕಡೆಗೆ ಹೋಗುವಾಗ ಎರಡೂ ಬದಿಯ ವಾಹನಗಳು ಜಂಕ್ಷನ್‌ನಲ್ಲಿ ಒಂದೆಡೆ ಸೇರುವುದರಿಂದ ಇಲ್ಲಿ ಅತಿಹೆಚ್ಚಿನ ದಟ್ಟಣೆ ಉಂಟಾಗುತ್ತಿದೆ. ಅಲ್ಲದೆ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಉಂಟಾಗುವ ವಾಹನ ದಟ್ಟಣೆಯಿಂದ ಎರಡೂ ಏಕಮುಖ ರಸ್ತೆಗಳಲ್ಲಿ ವಾಹನಗಳು ನಿಲ್ಲುತ್ತಿವೆ.
ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಹೊಸ ಗುಡ್ಡದಹಳ್ಳಿ ಸಮೀಪದಲ್ಲಿ ಪೈಪ್‌ಲೈನ್ ರಸ್ತೆ ಹಾಗೂ ಹೊಸಗುಡ್ಡದಹಳ್ಳಿಗೆ ಹೋಗಲು ವಾಹನಗಳು ತಿರುವು ಪಡೆದುಕೊಳ್ಳುತ್ತವೆ. ಇದು ಮುಖ್ಯ ರಸ್ತೆಯ ಸಂಚಾರದ ಮೇಲೆ ಪರಿಣಾಮ ಬೀರುತ್ತಿದೆ. ಹೆಚ್ಚಿನ ಸಮಯದಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ಸಂಚಾರ ವಿಳಂಬವಾಗುತ್ತಿದೆ.
‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಆರಂಭವಾದ ಬಳಿಕ ಮೈಸೂರು–ಬೆಂಗಳೂರು ನಡುವೆ ಸಂಚರಿಸುವವರ ಪ್ರಮಾಣವೂ ಹೆಚ್ಚಾಗಿದೆ. ಕೆಂಗೇರಿ ಸಮೀಪಿಸುತ್ತಿದ್ದಂತೆ ದಟ್ಟಣೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡುವುದು ತಪ್ಪುವುದಿಲ್ಲ. ದಟ್ಟಣೆ ಅವಧಿಯಾದ ಬೆಳಿಗ್ಗೆ ಮತ್ತು ಸಂಜೆ ವಾಹನಗಳು ಸಾಲುಗಟ್ಟಿ ನಿಲ್ಲಲಾರಂಭಿಸುತ್ತವೆ. ಅದರಲ್ಲೂ ಶನಿವಾರ, ಭಾನುವಾರ ಸೇರಿ ರಜೆ ದಿನಗಳಲ್ಲಿ ಕಿಲೋ ಮೀಟರ್‌ಗಳ ಉದ್ದಕ್ಕೂ ವಾಹನಗಳು ನಿಲ್ಲುತ್ತವೆ. ಕಾಯುವ ಸಮಯವೂ ಹೆಚ್ಚುತ್ತದೆ’ ಎನ್ನುತ್ತಾರೆ ಸಂಚಾರ ಪೊಲೀಸರು.
ಮೈಸೂರು– ಬೆಂಗಳೂರು ಎಕ್ಸ್‌ಪ್ರೆಸ್ ವೇ ಆರಂಭದವರೆಗೆ ತಲುಪಲು ಪ್ರಯಾಣಿಕರು ಪ್ರಯಾಸಪಡಬೇಕು. ಟೋಲ್ ತಪ್ಪಿಸುವ ಉದ್ದೇಶದಿಂದ ಕೆಂಗೇರಿಯಿಂದ ಮೈಸೂರು ಕಡೆಗೆ ತೆರಳುವ ಹೆಚ್ಚಿನ ಸಂಖ್ಯೆಯ ವಾಹನಗಳು, ಸರ್ವಿಸ್ ರಸ್ತೆ ಪ್ರವೇಶಿಸುತ್ತವೆ. ಇದರಿಂದ ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಎದುರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜಂಕ್ಷನ್‌ನಲ್ಲಿ ವಿಪರೀತ ವಾಹನಗಳು ಸೇರಿ, ಸಂಚಾರ ಸಮಸ್ಯೆ ಉಂಟಾಗುತ್ತಿದೆ.
‘ವಾರಾಂತ್ಯ, ರಜಾ ದಿನಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ಊರು, ಪ್ರವಾಸಕ್ಕೆಂದು ಪ್ರಯಾಣಿಕರು ಖಾಸಗಿ ಬಸ್ ಹಾಗೂ ಕ್ಯಾಬ್ ಬುಕ್ ಮಾಡಿಕೊಂಡಿರುತ್ತಾರೆ. ಖಾಸಗಿ ಬಸ್‌ಗಳನ್ನು ನಿಗದಿತ ಸಮಯಕ್ಕೂ ಮೊದಲೇ ರಸ್ತೆಬದಿಗೆ ತಂದು ನಿಲುಗಡೆ ಮಾಡಿರುತ್ತಾರೆ. ಇದರಿಂದ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಹಾಗೂ ಸಾರ್ವಜನಿಕರ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆಯ ಬದಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಹಿಂಬದಿಯ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ’ ಎನ್ನುತ್ತಾರೆ ಸ್ಥಳೀಯರು.
ಸ್ಯಾಟಲೈಟ್ ಬಸ್ ನಿಲ್ದಾಣ
ದೀಪಾಂಜಲಿ ನಗರ
ಪಂತರಪಾಳ್ಯ–ನಾಯಂಡಹಳ್ಳಿ ಜಂಕ್ಷನ್
ಜ್ಞಾನಭಾರತಿ ಮೆಟ್ರೊ ನಿಲ್ದಾಣ ಸುತ್ತಮುತ್ತ
ಕೆಂಗೇರಿ ಮೆಟ್ರೊ ನಿಲ್ದಾಣ
ಕೆಂಗೇರಿ ಬಸ್ ಟರ್ಮಿನಲ್ ಬಳಿ ಬಸ್ ತಂಗುದಾಣದ ಬಳಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ನಿಲ್ಲಿಸದೇ ರಸ್ತೆಯಲ್ಲೇ ನಿಲ್ಲಿಸಲಾಗುತ್ತದೆ. ಹಾಗಾಗಿ ಪ್ರಯಾಣಿಕರು ರಸ್ತೆಯಲ್ಲೇ ನಿಲ್ಲುವ ಕಾರಣ ವಾಹನ ದಟ್ಟಣೆ ಆಗುತ್ತದೆಲಕ್ಷ್ಮಿ ಆಟೊ ಚಾಲಕಿ ಮೈಲಸಂದ್ರ
ಮೈಸೂರು ರಸ್ತೆಯಲ್ಲಿ ವಾಹನಗಳ ಸಂಖ್ಯೆ ಅಧಿಕವಾಗಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತದೆ. ವಾಹನಗಳು ಕಿಲೋ ಮೀಟರ್ ಉದ್ದ ಸಾಲುಗಟ್ಟಿ ನಿಲ್ಲುವುದರಿಂದ ಕಾಯುವ ಸಮಯವೂ ಹೆಚ್ಚುಕಿರಣ್ ಖಾಸಗಿ ಕಂಪನಿ ಉದ್ಯೋಗಿ
ಸಂಚಾರ ದಟ್ಟಣೆ ಆಗದಂತೆ ಕ್ರಮ ವಹಿಸುವುದು ಅಪಘಾತವಾಗದ ರೀತಿಯಲ್ಲಿ ವಾಹನ ಚಾಲನೆ ಪ್ರಯಾಣಿಕರು ಹಾಗೂ ಎದುರಿನ ವಾಹನಗಳ ಚಾಲಕರ ಜತೆಗೆ ಸಂಯಮದಿಂದ ವರ್ತನೆ ಮಾಡಬೇಕು ಎಂಬುದರ ಕುರಿತು ಬಿಎಂಟಿಸಿ ಬಸ್ ಚಾಲಕರಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ನಾಲ್ಕು ವರ್ಷಗಳಲ್ಲಿ 20 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.