ADVERTISEMENT

ಅಸ್ಪೃಶ್ಯತೆಯ ರೋಗಕ್ಕೆ ದೊರೆಯದ ಔಷಧ

ಹಿಮಾಚಲ ಪ್ರದೇಶ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 16:08 IST
Last Updated 24 ಜುಲೈ 2022, 16:08 IST
ಎಲ್‌. ನಾರಾಯಣಸ್ವಾಮಿ ಹಾಗೂ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಕೊಟ್ರೇಶ್‌ ಚರ್ಚಿಸಿದರು. ವಾದಿರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ
ಎಲ್‌. ನಾರಾಯಣಸ್ವಾಮಿ ಹಾಗೂ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿ ಸದಸ್ಯ ಕೊಟ್ರೇಶ್‌ ಚರ್ಚಿಸಿದರು. ವಾದಿರಾಜ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆಧುನಿಕ ಜಗತ್ತು ಹಲವಾರು ಮಾರಣಾಂತಿಕ ರೋಗಗಳಿಗೆ ಔಷಧ ಸಂಶೋಧಿಸಿದೆ. ಆದರೂ ಶತಮಾನಗಳಿಂದ ಈ ಸಮಾಜವನ್ನು ಕಾಡುತ್ತಾ ಬಂದಿರುವ ಅಸ್ಪೃಶ್ಯತೆಯೆಂಬ ರೋಗಕ್ಕೆ ಮಾತ್ರ ಔಷಧ ದೊರೆಯದಿರುವುದು ವಿಪರ್ಯಾಸ’ ಎಂದುಹಿಮಾಚಲ ಪ್ರದೇಶದ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ದಿ ಮಿಥಿಕ್ ಸೊಸೈಟಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ದಲಿತಗುರು ದಿ. ತಲಕಾಡು ರಂಗೇಗೌಡ ಸ್ಮಾರಕ ದತ್ತಿ ಉಪನ್ಯಾಸ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಸ್ವಾರ್ಥ ರಾಜಕಾರಣಿಗಳ ಸ್ವಹಿತಾಸಕ್ತಿಗೆ ಜಾತಿವ್ಯವಸ್ಥೆ ಬಲಿಯಾಗಿದೆ.ಜಾತಿ ವ್ಯವಸ್ಥೆ ನಿರ್ಮೂಲವಾಗದೆ ಅಸ್ಪೃಶ್ಯತೆಗೆ ಪರಿಹಾರ ದೊರೆಯದು’ ಎಂದರು.

‘ಈ ಸಮಾಜದಲ್ಲಿ ದಲಿತರ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆಯಿದೆ. ಇದನ್ನು ಹೋಗಲಾಡಿಸುವ ಕೆಲಸವಾಗಬೇಕಿದೆ. ಯಾವುದೇ ಸಮುದಾಯಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಹೊಂದಲು ಶಿಕ್ಷಣ ಸಹಕಾರಿ.ಸ್ವಾತಂತ್ರ್ಯಪೂರ್ವದಲ್ಲಿ ದಲಿತರಿಗೆ ಶಿಕ್ಷಣ ಎಟುಕದ ಮಾತಾಗಿತ್ತು. ಅಂತಹ ಸಂದರ್ಭದಲ್ಲೂ ಅವರ ಏಳ್ಗೆಗೆ ತಲಕಾಡು ರಂಗೇಗೌಡ ಸೇರಿದಂತೆ ಹಲವರು ಶ್ರಮಿಸಿದರು’ ಎಂದರು.

ADVERTISEMENT

‘ಅಂಬೇಡ್ಕರ್ ಅವರ ಚಿಂತನೆಯಲ್ಲಿಯೂ ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಆದ್ಯತೆ ನೀಡಲಾಗಿತ್ತು. ಶಿಕ್ಷಣಕ್ಕೆ ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ. ಆದ್ದರಿಂದ ಶಿಕ್ಷಣದ ಮೂಲಕ ಬದಲಾವಣೆಗೆ ನಾಂದಿ ಹಾಡಿದ ಸಮಾಜ ಸುಧಾರಕರು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳಬೇಕು. ಶಾಲೆಗಳ ಪ್ರಾರಂಭದಂತಹ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು ‘ದಲಿತರ ಏಳಿಗೆಗೆ ಸವರ್ಣೀಯರ ಕೊಡುಗೆ’ ಎಂಬ ವಿಷಯದ ಬಗ್ಗೆ ಮಾತನಾಡಿ, ‘ಕುದ್ಮಲ್ ರಂಗ ರಾವ್,ತಲಕಾಡು ರಂಗೇಗೌಡ,ಕಾಕಾ ಕಾರಖಾನೀಸ್‌ ಸೇರಿದಂತೆ ಹಲವರು ದೀನ ದಲಿತರ ಏಳ್ಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಇಂತಹವರು ತಮ್ಮ ವರ್ಗದವರ ವಿರೋಧಗಳನ್ನೂ ಲೆಕ್ಕಿಸದೆ ದಲಿತೋದ್ದಾರಕ್ಕೆ ಶ್ರಮಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.