ನಬಾರ್ಡ್‌ನ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸ್ವಸಹಾಯ ಸಂಘಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಸವಿದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್. ನಬಾರ್ಡ್ ಪ್ರಾದೇಶಿಕ ನಿರ್ದೇಶಕಿ ಸೊನಾಲಿ ಸೇನ್ ಗುಪ್ತಾ, ನಬಾರ್ಡ್ ಸಿಜಿಎಂ ಸುರೇಂದ್ರ ಬಾಬು, ಕೆನರಾ ಬ್ಯಾಂಕ್‌ನ ಭವೇಂದ್ರ ಕುಮಾರ್ ಹಾಜರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ದೇವನಹಳ್ಳಿ, ಗೌರಿಬಿದನೂರು ಮತ್ತು ವೇಮಗಲ್‌ಗಳಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಾಲದ ರೂಪದಲ್ಲಿ ₹4,500 ಕೋಟಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಮಂಜೂರು ಮಾಡಿದೆ ಎಂದು ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ತಿಳಿಸಿದರು.
ನಗರದಲ್ಲಿ ನಡೆದ ನಬಾರ್ಡ್‌ನ 44ನೇ ಸಂಸ್ಥಾಪನಾ ದಿನಾಚಾರಣೆಯಲ್ಲಿ ಮಾತನಾಡಿದ ಅವರು, ‘ಇದು ಈ ವರ್ಷದಲ್ಲಿ ಮಂಜೂರಾಗಿರುವ ಅತಿ ದೊಡ್ಡ ಯೋಜನೆಯಾಗಿದೆ. ಯೋಜನೆ ಪೂರ್ಣಗೊಂಡ ನಂತರ 60 ಸಾವಿರ ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದು ಅವರು ವಿವರಿಸಿದರು.
‘ಕಳೆದ ಹಣಕಾಸು ವರ್ಷದಲ್ಲಿ ನಬಾರ್ಡ್ ರಾಜ್ಯದಲ್ಲಿ ವಾರ್ಷಿಕ ₹27,846 ಕೋಟಿಯಷ್ಟು ವಹಿವಾಟು ನಡೆಸಿದೆ. ಇದರಲ್ಲಿ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ₹21,442 ಕೋಟಿ, ರಾಜ್ಯ ಸರ್ಕಾರಕ್ಕೆ ₹4,974 ಕೋಟಿ, ಮೂಲಸೌಕರ್ಯ ಹಣಕಾಸು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ 1,431 ಕೋಟಿ ನೆರವು ಸೇರಿದೆ’ ಎಂದು ಅವರು ಮಾಹಿತಿ ನೀಡಿದರು.
‘ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ (ಆರ್‌ಡಿಐಎಫ್) ಈವರೆಗೆ 41,489 ಯೋಜನೆಗಳು ಪೂರ್ಣಗೊಂಡಿದ್ದು, 4.40 ಲಕ್ಷ ಹೆಕ್ಟೇರ್‌ನಷ್ಟು ನೀರಾವರಿ ಸೌಲಭ್ಯ ದೊರೆತಿದೆ. 44,405 ಕಿ.ಮೀನಷ್ಟು ಗ್ರಾಮೀಣ ರಸ್ತೆಗಳು, 55,502 ಮೀಟರ್ ಉದ್ದದ ಸೇತುವೆಗಳು ನಿರ್ಮಾಣಗೊಂಡಿವೆ. 13,480 ಗ್ರಾಮೀಣ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲ ನೀಡಲಾಗಿದೆ. 338 ಆರೋಗ್ಯ ಸೌಲಭ್ಯಗಳು ಮತ್ತು 800ಕ್ಕೂ ಹೆಚ್ಚು ಗ್ರಾಮೀಣ ಮಾರುಕಟ್ಟೆಗಳು ಮತ್ತಿತರ ಮಹತ್ವದ ಮೂಲಸೌಕರ್ಯ ನಿರ್ಮಾಣವಾಗಿವೆ’ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ‘ಮಳೆ ಬಂದಾಗ ಬಿತ್ತನೆ ಮಾಡಿ, ಮಳೆ ಬರದಿದ್ದಾಗ ವಲಸೆ ಹೋಗುವಂತೆ ಆಗಬಾರದು. ವರ್ಷವಿಡೀ ಕೆಲಸವೂ ಇರಬೇಕು. ಆದಾಯವೂ ಇರಬೇಕು. ಇದಕ್ಕಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿಸಿ, ಉತ್ಪನ್ನಗಳನ್ನಾಗಿ ಮಾರಾಟ ಮಾಡುವಂತಾಗಬೇಕು. ನಬಾರ್ಡ್ ಅಧಿಕಾರಿಗಳು ಈ ಕುರಿತು ಅಭಿಯಾನ ನಡೆಸಬೇಕು’ ಎಂದು ತಿಳಿಸಿದರು.
‘ಇತ್ತೀಚೆಗೆ ತೋತಾಪುರಿ ಮಾವಿನ ಬೆಲೆ ಕುಸಿಯಿತು. ಇಂಥ ಸಂದರ್ಭಗಳನ್ನು ಎದುರಿಸಲು ಮಾವು ಬೆಳೆದವರು ತಮ್ಮ ಹಳ್ಳಿಯಲ್ಲೇ ‘ಮೌಲ್ಯವರ್ಧಿತ ಉತ್ಪಾದನಾ ಘಟಕ’ ಮಾಡಿಕೊಂಡರೆ, ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿ ಆದಾಯ ಗಳಿಸಬಹುದು’ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ‘ಕರ್ನಾಟಕದಲ್ಲಿ ಎಫ್‌ಪಿಒಗಳ ಯಶಸ್ವಿ ಕಥೆಗಳು’ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.