ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ‘ಕನ್ನಡದ ಜಾತ್ಯಾತೀತತೆಯ ಸಂಕೇತವಾಗಿರುವ ನಾಡಹಬ್ಬ ದಸರಾವನ್ನು ಸಂಪೂರ್ಣ ಧಾರ್ಮಿಕ ಹಬ್ಬವೆಂದು ಬಿಂಬಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಘನತೆ ಕುಸಿತಕ್ಕೆ ಕಾರಣರಾಗಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಟೀಕಿಸಿದ್ದಾರೆ.
‘ಬಾನು ಮುಷ್ತಾಕ್ ಅವರನ್ನು ನಾಡಹಬ್ಬದ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವ ಸರ್ಕಾರದ ತೀರ್ಮಾನವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆ. ನಾಡಿನ ಜಾತ್ಯಾತೀತತೆಗೆ ಸಲ್ಲಿಸಿರುವ ಗೌರವವೂ ಹೌದು. ಹಿಂದೆ ಇಲ್ಲದ ವಿರೋಧ ಈಗ ಕಂಡು ಬರುತ್ತಿರುವುದರ ಹಿಂದೆ ಮಹಿಳಾ ವಿರೋಧಿ ನಿಲುವಷ್ಟೇ ಅಲ್ಲ, ಒಂದು ರಾಜಕೀಯ ವರ್ಗದ ಅನ್ನ ಮತ್ತು ಅಧಿಕಾರದ ಪ್ರಶ್ನೆ ಅಡಗಿದೆ’ ಎಂದಿದ್ದಾರೆ.
‘ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನ ಅರಸರಾಗಿದ್ದ ಸಂದರ್ಭದಲ್ಲಿ ಆನೆಯು ಹೊತ್ತು ತರುತ್ತಿದ್ದ ಪಲ್ಲಕಿಯ ಮೇಲೆ ತಾವೇ ಆಸೀನರಾಗಿರುತ್ತಿದ್ದರು. ಈಗ ಚಾಮುಂಡೇಶ್ವರಿಯ ವಿಗ್ರಹವನ್ನು ಕನ್ನಡದ ಪ್ರಾತಿನಿಧಿಕ ಸಂಕೇತವನ್ನಾಗಿ ಪಲ್ಲಕ್ಕಿಯಲ್ಲಿ ಕೂರಿಸುವುದು ಹೇಗೆ ಧಾರ್ಮಿಕತೆಯ ಕುರುಹಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.
‘ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮೈಸೂರಿನಲ್ಲಿ ದಸರಾ ಆಚರಣೆ ಆರಂಭವಾಗಿದ್ದು, ಹಂಪಿಯಲ್ಲಿ ನಡೆಯುತ್ತಿದ್ದ ದಸರಾ ದಿಬ್ಬಣದಲ್ಲಿ ಮುಸ್ಲಿಂ ಅರಬ್ಬರು, ಪರ್ಷಿಯನರು ಪಾಲ್ಗೊಳುತ್ತಿದ್ದ ಕುರಿತಂತೆ ದಾಖಲೆಗಳಿವೆ. ವಿರೋಧವು ನಮ್ಮ ಸಮಾಜವನ್ನು ನೂರಾರು ವರ್ಷಗಳ ಹಿಂದಕ್ಕೆ ಕೊಂಡೊಯ್ಯುವಂತಿದೆ’ ಎಂದಿದ್ದಾರೆ.
ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದರು. ಅವರ ಆಶಯಕ್ಕೆ ಭಂಗ ತರದೇ ಬಾಳಬೇಕಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸಾಮರಸ್ಯದ ನೆಲೆಗಳು ಶೀರ್ಷಿಕೆಯಡಿಯಲ್ಲಿ ಶೀಘ್ರ 40 ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದೆ ಎಂದು ಬಿಳಿಮಲೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.