ADVERTISEMENT

ಬೆಂಗಳೂರು: ನಾಗಮೋಹನ್‌ ದಾಸ್ ವರದಿ ಜಾರಿಗೆ ಆಗ್ರಹ

ಪರಿಶಿಷ್ಟ ಜಾತಿಗಳ ಒಕ್ಕೂಟದಿಂದ ಅಹೋರಾತ್ರಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 15:25 IST
Last Updated 11 ಆಗಸ್ಟ್ 2025, 15:25 IST
<div class="paragraphs"><p>ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದೆ. </p></div>

ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರದಿಂದ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದೆ.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್ ನೇತೃತ್ವದ ಆಯೋಗ ಸಲ್ಲಿಸಿದ ವರದಿಯನ್ನು ಅಧಿವೇಶನದಲ್ಲಿ ಅಂಗೀಕರಿಸಿ, ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಸೋಮವಾರದಿಂದ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದೆ.

ADVERTISEMENT

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ನೂರಾರು ಜನರು ಭಾಗವಹಿಸಿದ್ದರು.

ನಾಗಮೋಹನ್‌ ದಾಸ್ ಅವರು ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದೆ ಎಂದು ಕೆಲವರು ವರದಿಯ ಪ್ರತಿಯನ್ನು ಸುಟ್ಟು ಹಾಕುವ ಮೂಲಕ ಸಂವಿಧಾನಕ್ಕೆ ಅಗೌರವ ಉಂಟು ಮಾಡಿದ್ದಾರೆ. ವರದಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಬೇಕಿದ್ದರೆ, ನಾಗಮೋಹನ್ ದಾಸ್ ಅವರ ಅಭಿಪ್ರಾಯ ಪಡೆದು, ಜಾರಿಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ ಕೌತಾಳ್ ಮಾತನಾಡಿ, ‘ಒಳ ಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸುಪ‍್ರೀಂ ಕೋರ್ಟ್‌ ತೀರ್ಪು ನೀಡಿದೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ನೊಂದ ಜನರಿಗೆ ಅನ್ಯಾಯವೆಸಗುತ್ತಾ ಬಂದಿವೆ. 35 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಸಮೀಕ್ಷಾ ವರದಿ ವೈಜ್ಞಾನಿಕವಾಗಿದ್ದು, ಸರ್ವ ದತ್ತಾಂಶಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

‘ಅಧಿವೇಶನದಲ್ಲಿಯೇ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು. ಬದಲಿಗೆ ಮತ್ತೊಂದು ಸಂಪುಟ ಉಪಸಮಿತಿ ರಚನೆ ಅಥವಾ ತಜ್ಞರ ಸಲಹೆ ನೆಪದಲ್ಲಿ ಮತ್ತಷ್ಟು ಕಾಲ ಮುಂದೂಡುವುದನ್ನು ಒಪ್ಪುವುದಿಲ್ಲ. ಆಗಸ್ಟ್‌ 16ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.  

ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಕೈ ಬಿಡಬೇಕು. ಮುಖ್ಯಮಂತ್ರಿ ಅವರು ಶಾಸನಬದ್ಧ ಅಧಿಕಾರ ಬಳಸಿ ಒಳ ಮೀಸಲಾತಿ ಜಾರಿಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಮುಖಂಡರಾದ ಅಂಬಣ್ಣ ಅರೋಲಿಕರ್, ಕರಿಯಪ್ಪ ಗುಡಿಮನಿ, ಸಣ್ಣ ಮಾರೆಪ್ಪ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.