ADVERTISEMENT

ತಮಿಳುನಾಡಿನ ಜಾನಪದ ಕಲಾವಿದ ಟಿ.ಲಕ್ಷ್ಮೀಪತಿಗೆ ‘ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 0:30 IST
Last Updated 14 ನವೆಂಬರ್ 2025, 0:30 IST
ಟಿ. ಲಕ್ಷ್ಮೀಪತಿ
ಟಿ. ಲಕ್ಷ್ಮೀಪತಿ   

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ನೀಡುವ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ಗೆ ತಮಿಳುನಾಡಿನ ಜಾನಪದ ಕಲಾವಿದ ಟಿ.ಲಕ್ಷ್ಮೀಪತಿ ಆಯ್ಕೆಯಾಗಿದ್ದಾರೆ. 

ಈ ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಫಲಕ ಒಳಗೊಂಡಿದೆ. ಸಾಹಿತಿ ಹಾಗೂ ಜಾನಪದ ಲೋಕದ ನಿರ್ಮಾತೃ ಎಚ್.ಎಲ್. ನಾಗೇಗೌಡ ಅವರ ಸ್ಮರಣಾರ್ಥ ಈ ಪ್ರಶಸ್ತಿ ನೀಡಲಾಗುತ್ತಿದೆ. ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 

ಟಿ. ಲಕ್ಷೀಪತಿ ಅವರು ತೆರುಕೂತು ಕಲೆಯ ಕಲಾವಿದರಾಗಿದ್ದಾರೆ. ಈ ಕಲೆಯು ತಮಿಳುನಾಡಿನ ಪಾರಂಪರಿಕ ಪ್ರದರ್ಶಕ ಕಲೆಗಳಲ್ಲಿ ಒಂದಾಗಿದೆ. ಲಕ್ಷ್ಮೀಪತಿ ಅವರು ಈ ಕಲೆಯಲ್ಲಿ ನೂರಾರು ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಕರ್ನಾಟಕ ಸಂಗೀತದ ರಾಗಗಳನ್ನು ಸೇರಿಸಿ ಈ ಕಲೆಯ ಮಟ್ಟವನ್ನು ಹೆಚ್ಚಿಸುವ ಜತೆಗೆ, ಆಧುನಿಕ ವೇದಿಕೆ ಕಲ್ಪಿಸುವ ಮೂಲಕ ಕಲೆಯನ್ನು ಜೀವಂತವಾಗಿಸಿದ್ದಾರೆ. 

ADVERTISEMENT

ಇದೇ 17ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಸೌಮ್ಯನಾಥ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು, ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಅವರು ಸಮಾರಂಭ ಉದ್ಘಾಟಿಸುತ್ತಾರೆ ಎಂದು ಪರಿಷತ್ತಿನ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.