ADVERTISEMENT

ಮನೆಗೆ ಕರೆಸಿಕೊಳ್ಳದಿದ್ದರೆ ಎಲ್ಲಾದರೂ ಓಡಿಹೋಗುವೆ: ಶಾರದಾ ದಾಬಡೆ

ತಂದೆಗೆ ಪತ್ರ ಬರೆದು ಬೆದರಿಸಿದ್ದ ನಾಗೇಶ ಹೆಗಡೆ– ರೆಬೆಲ್‌ ಅಣ್ಣನ ಬಾಲ್ಯದ ನೆನಪಿನ ಬುತ್ತಿ ಬಿಚ್ಚಿಟ್ಟ ಸಹೋದರಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 19:30 IST
Last Updated 20 ಮಾರ್ಚ್ 2022, 19:30 IST
ನಾಗೇಶ ಹೆಗಡೆ ಅವರನ್ನು ವಿ.ಗಾಯತ್ರಿ ಅಭಿನಂದಿಸಿದರು. (ಎಡದಿಂದ) ಕೆ.ಎನ್‌.ಗಣೇಶಯ್ಯ, ಲೇಖಕ ಡಾ.ಜಿ.ರಾಮಕೃಷ್ಣ, ಪ್ರೊ.ಬಿ.ಕೆ.ಚಂದ್ರಶೇಖರ್‌ ಹಾಗೂ ಗುರುರಾಜ್‌ ಎಸ್‌.ದಾವಣಗೆರೆ ಇದ್ದರು–ಪ್ರಜಾವಾಣಿ ಚಿತ್ರ
ನಾಗೇಶ ಹೆಗಡೆ ಅವರನ್ನು ವಿ.ಗಾಯತ್ರಿ ಅಭಿನಂದಿಸಿದರು. (ಎಡದಿಂದ) ಕೆ.ಎನ್‌.ಗಣೇಶಯ್ಯ, ಲೇಖಕ ಡಾ.ಜಿ.ರಾಮಕೃಷ್ಣ, ಪ್ರೊ.ಬಿ.ಕೆ.ಚಂದ್ರಶೇಖರ್‌ ಹಾಗೂ ಗುರುರಾಜ್‌ ಎಸ್‌.ದಾವಣಗೆರೆ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು:‌‘ಅಣ್ಣಯ್ಯ ರೆಬೆಲ್‌ ಆದ. ಎಲ್ಲಿಂದಲೋ ಅಂಚೆ ಕಾರ್ಡ್‌ ಹೊಂದಿಸಿಕೊಂಡು, ‘ಶಾಲೆ ಬಿಡ್ತೇನೆ, ಮನೆಗೆ ಕರೆಸಿಕೊಳ್ಳದಿದ್ದರೆ ಎಲ್ಲಾದರೂ ಓಡಿ ಹೋಗ್ತೇನೆ’ ಎಂದು ಅಪ್ಪಯ್ಯನಿಗೆ ಪತ್ರ ಬರೀತಾ ಇದ್ದ’...

ನಾಗೇಶ ಹೆಗಡೆ ಅಭಿನಂದನಾ ಸಮಿತಿ ಹೊರತಂದಿರುವ ‘ನೆಲಗುಣ’ ಅಭಿನಂದನಾ ಗ್ರಂಥದಲ್ಲಿ ಶಾರದಾ ದಾಬಡೆ ಅವರು ಸಹೋದರನ ಬಾಲ್ಯದ ನೆನಪುಗಳನ್ನು ಸ್ಮರಿಸಿದ ಪರಿ ಇದು.

‘ಅಣ್ಣನನ್ನು ಒಂದು ತಿಂಗಳು ತಡವಾಗಿ ಬೇರೆ ಊರಿನ ಶಾಲೆಯೊಂದಕ್ಕೆಸೇರಿಸಲಾಗಿತ್ತು. ಗಣಿತ ಪಾಠ ಅರ್ಥವಾಗದೆ ರೋಸಿ ಹೋಗಿ ಈ ರೀತಿ ಪತ್ರ ಬರೆದಿದ್ದ. ಕ್ರಮೇಣ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಕನ್ನಡ ವಿಷಯದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದಿದ್ದ. ಈ ಸಂಬಂಧ ಅಪ್ಪನಿಗೆ ಪತ್ರವೊಂದು ಬಂದಿತ್ತು. ಆತನಿಗೆ ಬಹುಮಾನ ಕೊಡುತ್ತಿರುವ ಉಲ್ಲೇಖ ಅದರಲ್ಲಿತ್ತು. ಅದನ್ನು ನೋಡಿದೊಡನೆ ಅಣ್ಣನನ್ನು ಕರೆದುಕೊಂಡು ಮುಖ್ಯೋಪಾಧ್ಯಾಯರ ಮನೆಗೆ ಹೋಗಿದ್ದ ಅವರು ಅವರು ನೀಡಿದ್ದ 5 ರೂಪಾಯಿ ನೋಟನ್ನುಸುಮಾರು ಒಂದು ತಿಂಗಳು ಊರಿನವರಿಗೆಲ್ಲಾ ತೋರಿಸಿ ಸಂಭ್ರಮಿಸಿದ್ದರು’ ಎಂದು ಲೇಖನದಲ್ಲಿ ವಿವರಿಸಿದಿದ್ದಾರೆ.

ADVERTISEMENT

ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಸಂಪಾದಕ ಗುರುರಾಜ್‌ ಎಸ್‌.ದಾವಣಗೆರೆ ಭಾನುವಾರ ಈ ಕುರಿತ ಮಾಹಿತಿ ಹಂಚಿಕೊಂಡರು.

‘ನಾಗೇಶ ಹೆಗಡೆಯವರ ಕೆಲಸಗಳಿಗೆ ಹೊಂದಿಕೊಳ್ಳುವಂತಹ ಶೀರ್ಷಿಕೆ ಪುಸ್ತಕಕ್ಕೆ ಇಡಬೇಕೆಂಬ ಅಭಿಲಾಷೆ ನಮ್ಮದಾಗಿತ್ತು. ಸಾಹಿತಿ ಜಯಂತ ಕಾಯ್ಕಿಣಿ ಅವರು ಸೂಚಿಸಿದ ‘ನೆಲಗುಣ’ ಹೆಸರನ್ನೇ ಅಂತಿಮಗೊಳಿಸಿದೆವು. ಮೊದಲ ಸಂಪುಟದಲ್ಲಿ 62 ಲೇಖಕರ ಬರಹ ಪ್ರಕಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಪುಟ ಹೊರತರುತ್ತೇವೆ’ ಎಂದರು.

‘ನಾಗೇಶ ಹೆಗಡೆ ಎಂಬ ‘ಇರುವೆ’, ‘ಸೆಲೆಬ್ರೆಟಿಗಳ ಸೃಷ್ಟಿಕರ್ತ’, ‘ಶಿಷ್ಯರಿಗೆ ಏಣಿ ಮತ್ತು ಗುರಾಣಿ’, ‘ಭಾಷೆಯ ವಿಷಯದಲ್ಲಿ ಕರ್ಮಠ’, ‘ನಮ್ಮ ನಡುವಣ ಗೂಗಲ್ ಪ್ಲಸ್‌’, ‘ಶಕುನದ ಹಕ್ಕಿ’‌ ಮುಂತಾದ ಲೇಖನಗಳು ಪುಸ್ತಕದಲ್ಲಿವೆ. ಜಯಂತ ಕಾಯ್ಕಿಣಿ ಅವರು ಹವ್ಯಕ ಭಾಷೆಯಲ್ಲೇ ಲೇಖನ ಬರೆದುಕೊಟ್ಟಿದ್ದಾರೆ. ಎ.ಆರ್‌.ಮಣಿಕಾಂತ್‌ ಅವರ ‘ಮದ್ದೂರು ವಡೆ’ ಸೇರಿದಂತೆ ಹಲವು ವಿಶೇಷ ಪ್ರಸಂಗಗಳ ಕುರಿತ ಲೇಖನಗಳೂ ಪುಸ್ತಕದಲ್ಲಿ ಇವೆ’ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌ (ರಾಜಕೀಯ ತಾಪದಲ್ಲಿ ಭೂಮಿಯ ಭವಿಷ್ಯ), ಕೃಷಿ ಚಿಂತಕಿ ವಿ.ಗಾಯತ್ರಿ (ಭೂ ಬಿಸಿಯ ಕಾಲದಲ್ಲಿ ನೆಲದವರ ನಾಳೆಗಳು) ಹಾಗೂ ಸಸ್ಯವಿಜ್ಞಾನಿ ಪ್ರೊ.ಕೆ.ಎನ್‌.ಗಣೇಶಯ್ಯ (ವಿಜ್ಞಾನಿಗಳ ಮೂಸೆಯಲ್ಲಿ ಎನ್‌ಎಚ್‌, ಪಿ.ಸಿ. ಮತ್ತು ಇ.ಟಿ) ಉಪನ್ಯಾಸ ನೀಡಿದರು.

‘ಅನ್ನಕೊಟ್ಟ ಸುಧಾ–ಪ್ರಜಾವಾಣಿ’
‘ಸುಧಾ’ ಹಾಗೂ ‘ಪ್ರಜಾವಾಣಿ’ ನನಗೆ ಅನ್ನ ಕೊಟ್ಟಿವೆ.ಇವು ಬದುಕಿಗೊಂದು ಅರ್ಥ ಕೊಟ್ಟಿವೆ. ನನಗೆ ಸಿಗುತ್ತಿರುವ ಗೌರವದಲ್ಲಿ ಈ ಪತ್ರಿಕೆಗಳ ಪಾಲು ಬಹುದೊಡ್ಡದು’ ಎಂದು ನಾಗೇಶ ಹೆಗಡೆ ಹೇಳಿದರು.

‘ದಿ ಪ್ರಿಂಟರ್ಸ್‌ ಮೈಸೂರು (ಪ್ರೈ) ಲಿಮಿಟೆಡ್‌ ಸಂಸ್ಥೆ ನಾಲ್ಕು ದಶಕಗಳಿಂದ ನಿರಂತರವಾಗಿ ಅಂಕಣ ಬರೆಯಲು ಅವಕಾಶ ಕೊಟ್ಟಿದೆ. ಬರಹಗಳಿಗೆ ಪ್ರತಿರೋಧ ಎದುರಾದಾಗ ಸದಾ ಬೆಂಬಲಕ್ಕೆ ನಿಂತಿದೆ’ ಎಂದು ಸ್ಮರಿಸಿದರು.

ಅಭಿನಂದನಾ ಗ್ರಂಥಕ್ಕೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸುವಾಗ ಗದ್ಗದಿತರಾಗಿ ಅವರು ಮಾತು ನಿಲ್ಲಿಸಿದರು.

ಪುಸ್ತಕ ಪರಿಚಯ

ಹೆಸರು: ನೆಲಗುಣ

‍ಪ್ರಧಾನ ಸಂಪಾದಕ: ಗುರುರಾಜ್‌ ಎಸ್‌.ದಾವಣಗೆರೆ

ಪುಟ: 434

ಬೆಲೆ: ₹250

ಪ್ರಕಾಶನ: ನಾಗೇಶ ಹೆಗಡೆ ಅಭಿನಂದನಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.