ADVERTISEMENT

ರಾಜ್ಯವನ್ನು ಸಮೃದ್ಧವಾಗಿಸಿದ ನಾಲ್ವಡಿ ಕೃಷ್ಣರಾಜ: ಸಾಹಿತಿ ಬಂಜಗೆರೆ ಜಯಪ್ರಕಾಶ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 16:35 IST
Last Updated 10 ಡಿಸೆಂಬರ್ 2024, 16:35 IST
   

ಬೆಂಗಳೂರ: ಕರ್ನಾಟಕವನ್ನು ಅಭಿವೃದ್ಧಿ, ಪ್ರಗತಿಶೀಲ ಮತ್ತು ಸಾಮಾಜಿಕ ನೆಲಗಟ್ಟಿನಲ್ಲಿ ಸಮೃದ್ಧ ರಾಜ್ಯವನ್ನಾಗಿ ನಿರ್ಮಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಸಲ್ಲುತ್ತದೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಕೋಶ ಮತ್ತು ಇತಿಹಾಸ, ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜೀವನ, ಸಾಧನೆ ಮತ್ತು ಸುಧಾರಣೆಗಳು’ ಎಂಬ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಿಟಿಷ ವಸಾಹತುಶಾಹಿ ಆಳ್ವಿಕೆಯ ಚೌಕಟ್ಟುಗಳು, ಮಿತಿಗಳು ಇದ್ದಾಗಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವೆಲ್ಲವೂಗಳನ್ನು ಮೀರಿ ಸಮೃದ್ಧ ರಾಜ್ಯವನ್ನು ನಿರ್ಮಿಸಿದ್ದಾರೆ. ಕೈಗಾರಿಕೆ, ಕಾರ್ಖಾನೆ, ರೈಲು ಮಾರ್ಗ, ವಿದ್ಯುತ್‌ ಸ್ಥಾವರ, ಅಣೆಕಟ್ಟುಗಳನ್ನು ನಿರ್ಮಿಸಿ ಅಭಿವೃದ್ಧಿ ಸಾಧಿಸಿದರು’ ಎಂದರು.

ADVERTISEMENT

‘ದೇಶದಲ್ಲೆ ಮೊದಲ ಬಾರಿಗೆ ಜಾತಿ ಸಮೀಕ್ಷೆ ನಡೆಸಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದರು. ಮಹಿಳೆಯರ ವಿದ್ಯಾಭ್ಯಾಸಕ್ಕೆ ಸಾಕಷ್ಟು ಒತ್ತು ನೀಡಿದರು. ಅದರಲ್ಲೂ ದಲಿತ, ಹಿಂದುಳಿದ ವಿದ್ಯಾರ್ಥಿನಿಯರಿಗಾಗಿ ಮಹಿಳಾ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು ಎಂದು ಸ್ಮರಿಸಿದರು.

ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ನಾಲ್ವಡಿ ಅವರ ಕಾಲದ ಕೃಷಿ ಮತ್ತು ನೀರಾವರಿ ಅಭಿವೃದ್ಧಿಯ ಪರಿಕಲ್ಪನೆ, ಸಾಮಾಜಿಕ ಸುಧಾರಣೆಗಳು ಮತ್ತು ಮಹಿಳಾ ಪರ ಕಾಳಜಿಗಳು, ಆಡಳಿತಾತ್ಮಕ ಸುಧಾರಣೆ, ಪ್ರಜಾತಾಂತ್ರಿಕ ವ್ಯವಸ್ಥೆಯ ಅನುಷ್ಠಾನ, ಮೀಸಲಾತಿ ಪರಿಕಲ್ಪನೆ–ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳು, ಕೈಗಾರಿಕೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗಳ ಕುರಿತು ವಿಶೇಷ ಉಪನ್ಯಾಸಗಳು ನಡೆದವು.

ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಸ್.ಎಂ., ಕುಲಸಚಿವ ಶೇಖ್ ಲತೀಫ್, ನಿವೃತ್ತ ರಾಜ್ಯ ಚುನಾವಣಾ ಆಯುಕ್ತರು ಶ್ರೀನಿವಾಸಾಚಾರ್, ಹಿಂದುಳಿದ ವರ್ಗಗಳ ಕೋಶ ವಿಶೇಷಾಧಿಕಾರಿ ಡಿ.ಕೆ. ಚಿತ್ತಯ್ಯ ಪೂಜಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.