ADVERTISEMENT

‘ನಮ್ಮ ಮನೆ– ನಮ್ಮ ಬೂತ್’: ದುಂದುವೆಚ್ಚಕ್ಕೆ ದಾರಿ?

ಕಾರ್ಯಕ್ರಮಕ್ಕೆ ಬಿಜೆಪಿಯಲ್ಲೇ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:31 IST
Last Updated 14 ಜುಲೈ 2020, 21:31 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಕುರಿತು ಅರಿವು ಮೂಡಿಸುವ ‘ನಮ್ಮ ಮನೆ ನಮ್ಮ ಬೂತ್‌’ ಕಾರ್ಯಕ್ರಮ ಹಣ ಪೋಲು ಮಾಡುವ ಯೋಜನೆ ಎಂಬ ಟೀಕೆ ಬಿಜೆಪಿ ವಲಯದಲ್ಲೇ ಕೇಳಿ ಬಂದಿದೆ.

ಪ್ರತಿಯೊಂದು ವಾರ್ಡ್‌ನಲ್ಲೂ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ತಲಾ ₹20 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಮೊತ್ತವನ್ನು ₹50 ಲಕ್ಷಕ್ಕೆ ಏರಿಕೆ ಮಾಡಬೇಕು ಎಂಬುದಾಗಿ ಪಾಲಿಕೆ ಸದಸ್ಯರು ಒತ್ತಡವನ್ನೂ ಹೇರಲಾರಂಭಿಸಿದ್ದಾರೆ.

‘ಕೋವಿಡ್‌ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿಲ್ಲ ಎಂದು ಬಿಬಿಎಂಪಿ ಸದಸ್ಯರು ಕಂದಾಯ ಸಚಿವ ಆರ್‌.ಅಶೋಕ ಅವರ ಬಳಿ ಕೆಲವು ದಿನಗಳ ಹಿಂದೆ ದೂರಿಕೊಂಡಿದ್ದರು. ಸದಸ್ಯರನ್ನು ಸಮಾಧಾನಪಡಿಸಲು ಅಶೋಕ ಈ ಕಾರ್ಯಕ್ರಮ ಮುಂದಿಟ್ಟರು’ ಎಂದು ಬಿಜೆಪಿ ಮೂಲಗಳು ಹೇಳಿವೆ.

ADVERTISEMENT

ಈ ಕಾರ್ಯಕ್ರಮದಡಿ ಮನೆ- ಮನೆಗೆ ಹೋಗಿ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುಖ್ಯವಾಗಿ ಜ್ವರ ಪತ್ತೆ ಮಾಡಿ, ಸ್ಯಾನಿಟೈಸರ್‌ ಮತ್ತು ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಈ ಕೆಲಸ ಮಾಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಈಗ ಪಾಲಿಕೆ ಸದಸ್ಯರ ಜತೆಗೆ ಹಿಂಬಾಲಕರ ದೊಡ್ಡ ಪ‍ಡೆಯೇ ಮನೆ ಮನೆಗೆ ಹೋಗುತ್ತಿದ್ದು, ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಧಾಟಿಯಲ್ಲಿದೆ ಈ ಕಾರ್ಯಕ್ರಮ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಬುಧವಾರದಿಂದ ಒಂದು ವಾರ ಲಾಕ್‌ಡೌನ್‌ ಇರಲಿದೆ. ಯಾರೂ ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. ಇಂತಹ ವೇಳೆಯಲ್ಲಿ, ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಅರಿವು ಮೂಡಿಸಲು ಸಾಧ್ಯ. ಮಾಸ್ಕ್‌, ಸ್ಯಾನಿಟೈಸರ್‌ಗಳ ಖರೀದಿಯಲ್ಲಿ ಯಾವ ರೀತಿ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯ. ಸರ್ಕಾರ ಅನಗತ್ಯ ಆರೋಪಕ್ಕೆ ಒಳಗಾಗುವುದನ್ನು ತಪ್ಪಿಸಲು ಇಂತಹ ಕಾರ್ಯಕ್ರಮಗಳ ಮೇಲೆ ನಿಗಾ ಇಡಬೇಕು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

‘ಕೋವಿಡ್‌ ನಿರ್ವಹಣೆಯಲ್ಲಿ ಹಲವರಿಗೆ ಜವಾಬ್ದಾರಿ ನೀಡಿದರೆ ಗೊಂದಲ ಹೆಚ್ಚಾಗುತ್ತದೆಯೇ ಹೊರತು ಪರಿಹಾರ ಸಿಗುವುದು ಕಷ್ಟ. ಹಣ ಖರ್ಚಾಗುತ್ತದೆಯೇ ಹೊರತು, ಹೆಚ್ಚಿನ ಲಾಭ ಆಗುವುದಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.