ADVERTISEMENT

ನಮ್ಮ ಮೆಟ್ರೊ | ಹವಾನಿಯಂತ್ರಣ ವ್ಯವಸ್ಥೆ ಬದಲು

ಸೋಂಕು ತಡೆಗೆ ಮೆಟ್ರೊ ಬೋಗಿಯೊಳಗೆ ತಾಜಾ ಗಾಳಿಯಾಡುವಂತೆ ಕ್ರಮ

ಪ್ರವೀಣ ಕುಮಾರ್ ಪಿ.ವಿ.
Published 5 ಜೂನ್ 2020, 22:12 IST
Last Updated 5 ಜೂನ್ 2020, 22:12 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆಯೇ ‘ನಮ್ಮ ಮೆಟ್ರೊ’ ಸೇವೆ ಪುನರಾರಂಭಿಸಲು ಸಿದ್ಧತೆ ನಡೆಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೊರೊನಾ ಸೋಂಕು ಹಬ್ಬುವುದನ್ನು ತಡೆಯುವ ಉದ್ದೇಶದಿಂದ ನೆಲದಡಿಯ ನಿಲ್ದಾಣಗಳ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡುತ್ತಿದೆ.

ನಮ್ಮ ಮೆಟ್ರೊ ನೆಲದಡಿಯ ನಿಲ್ದಾಣಗಳು ಸಂಪೂರ್ಣ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯನ್ನು ಒಳಗೊಂಡಿವೆ. ಇಲ್ಲಿನ ಹವಾನಿಯಂತ್ರಿತ ಪ್ರದೇಶಗಳಲ್ಲಿ ಹೊಸ ಗಾಳಿಯಾಡುವ ಅವಕಾಶ ಕಡಿಮೆ ಇದ್ದು, ಅಲ್ಲಿರುವ ಗಾಳಿಯೇ ಪದೇ ಪದೇ ಆವರ್ತನಗೊಳ್ಳುತ್ತದೆ. ಇಂತಹ ವಾತಾವರಣದಲ್ಲಿ ಕೋವಿಡ್‌– 19 ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವ ಸಾಧ್ಯತೆ ಹೆಚ್ಚು.

ಕೋವಿಡ್‌–19 ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯಲ್ಲಿಕೆಲವೊಂದು ಮಾರ್ಪಾಡುಗಳನ್ನು
ಮಾಡುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಹಾಗೂ ಇಂಡಿಯನ್ ಸೊಸೈಟಿ ಆಫ್‌ ಹೀಟಿಂಗ್‌ ರೆಫ್ರಿಜರೇಟಿಂಗ್‌ ಆ್ಯಂಡ್‌ ಏರ್‌ ಕಂಡೀಷನಿಂಗ್‌ ಎಂಜಿನಿಯರ್ಸ್‌ (ಐಎಸ್‌ಎಚ್‌ಆರ್‌ಎಇ)ಕೆಲವು ನಿರ್ದೇಶನಗಳನ್ನು ನೀಡಿವೆ. ಇದರ ಆಧಾರದಲ್ಲಿ ಹವಾನಿಯಂತ್ರಣ ವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿ ಪ್ರತ್ಯೇಕ ಮಾದರಿ ಕಾರ್ಯವಿಧಾನವನ್ನು (ಎಸ್‌ಒಪಿ) ಬಿಎಂಆರ್‌ಸಿಎಲ್‌ ಸಿದ್ಧಪಡಿಸಿದೆ.

ADVERTISEMENT

‘ಎತ್ತರಿಸಿದ ಮಾರ್ಗಗಳಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲ. ನೆಲದಡಿಯ ನಿಲ್ದಾಣಗಳಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಿದ್ದೇವೆ. ಇಲ್ಲಿ ಅನುಕ್ಷಣವೂ ಶೇ 100ರಷ್ಟು ತಾಜಾ ಗಾಳಿಯಾಡುವಂತೆ ವ್ಯವಸ್ಥೆ ಕಲ್ಪಿಸುವ ಕುರಿತು ಮಾರ್ಗಸೂಚಿ ಸಿದ್ಧಪಡಿಸಿದ್ದೇವೆ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಐಎಸ್‌ಎಚ್‌ಆರ್‌ಎಇ ಮಾರ್ಗಸೂಚಿ ಪ್ರಕಾರ ಸಾಕಷ್ಟು ಗಾಳಿಯಾಡುವ ವ್ಯವಸ್ಥೆ ಇರುವಲ್ಲಿ 24ರಿಂದ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹಾಗೂ ಶೇ 40ರಿಂದ ಶೇ 70ರಷ್ಟು ತೇವಾಂಶ ಕಾಯ್ದುಕೊಳ್ಳಬೇಕು. ನೆಲದಡಿಯ ನಿಲ್ದಾಣಗಳಲ್ಲಿ 27 ಡಿಗ್ರಿ ಸೆಂಟಿಗ್ರೇಡ್‌ (ಅಥವಾ ಅದಕ್ಕಿಂತ ಒಂದು ಸೆಂಟಿಗ್ರೇಡ್‌ ಆಚೀಚೆ) ಉಷ್ಣಾಂಶವನ್ನು ಕಾಯ್ದುಕೊಳ್ಳುವ ಹಾಗೂ ಸಾಕಷ್ಟು ಗಾಳಿಯಡುವ ವ್ಯವಸ್ಥೆ ಕಲ್ಪಿಸಲಾಗಿದೆ. ವಾತಾವರಣದ ತೇವಾಂಶ ಶೇ 55ರಿಂದ ಶೇ 65ರ ನಡುವೆ ಇರುವಂತೆ ನೋಡಿಕೊಳ್ಳಲಾಗುತ್ತದೆ.

ಬೆಳಿಗ್ಗ 6ರಿಂದ ಬೆಳಿಗ್ಗೆ 8.30ರವರೆಗೆ ಹಾಗೂ ರಾತ್ರಿ 9 ಗಂಟೆ ನಂತರ ಸಂಪೂರ್ಣ ಗಾಳಿಯಾಡುವ ಓಪನ್‌ ಮೋಡ್‌ ವ್ಯವಸ್ಥೆಯನ್ನು ಅಳವಡಿಸಿ
ಕೊಳ್ಳಬೇಕು. ಈ ಅವಧಿಯಲ್ಲಿ ನಿಲ್ದಾಣದಲ್ಲಿ ಪ್ರಯಾಣಿಕರು ಸೇರುವ ಸ್ಥಳಗಳಿಗೆ ಶಾಫ್ಟ್‌ಗಳ ಮೂಲಕ ತಾಜಾ ಗಾಳಿ ಪೂರೈಸಬೇಕು. ಹಾಗೂ ಬಳಸಿದ ಗಾಳಿಯನ್ನು ಹೊರದಬ್ಬುವ ವ್ಯವಸ್ಥೆ (ಎಕ್ಸಾಸ್ಟ್‌ ಶಾಫ್ಟ್‌) ಸದಾ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳಬೇಕು. ಬೆಳಿಗ್ಗೆ 8.30ರಿಂದ ರಾತ್ರಿ 9 ಗಂಟೆವರೆಗೆ ಓಪನ್‌ ಮೋಡ್‌ನ ಜೊತೆಗೆ ಶೀಥಲ ಯಂತ್ರಗಳನ್ನು ಬಳಸಿ ಉಷ್ಣಾಂಶ ಹೆಚ್ಚದಂತೆ ಹಾಗೂ ತೇವಾಂಶ ಏರುಪೇರಾಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ನೆಲದಡಿಯ ನಿಲ್ದಾಣಗಳಲ್ಲಿ ಗಾಳಿಯಲ್ಲಿರುವ ಸೋಂಕು ನಿವಾರಣೆ ಸಲುವಾಗಿ ನೇರಳಾತೀತ ದೀಪ (ಯು.ವಿ ಲ್ಯಾಂಪ್‌) ಸದಾ ಉರಿಯುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿ‌ಸಲಾಗಿದೆ.

‘ಕಂಟೈನ್‌ಮೆಂಟ್‌ನಲ್ಲಿ ನಿಲುಗಡೆ ಇಲ್ಲ’
ಯಾವುದಾದರೂ ಮೆಟ್ರೊ ನಿಲ್ದಾಣ ಇರುವ ಪ್ರದೇಶವನ್ನು ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶ ಎಂದು ಬಿಬಿಎಂಪಿ ಘೋಷಿಸಿದ್ದರೆ, ಆ ನಿಲ್ದಾಣದಲ್ಲಿ ಮೆಟ್ರೊ ರೈಲುಗಳಿಗೆ ನಿಲುಗಡೆ ನೀಡುವುದಿಲ್ಲ. ಅಲ್ಲಿನ ನಿಲ್ದಾಣವೂ ಸಂಪೂರ್ಣ ಬಂದ್‌ ಆಗಿರಲಿದೆ.

*
ನಮ್ಮ ಮೆಟ್ರೊ ಸೇವೆ ಪುನರಾರಂಭದ ಬಗ್ಗೆ ಇನ್ನೂ ಸೂಚನೆ ಬಂದಿಲ್ಲ. ಸರ್ಕಾರದಿಂದ ಸೂಚನೆ ಬಂದ ತಕ್ಷಣವೇ ಕಾರ್ಯಾಚರಣೆಗೆ ಸಜ್ಜಾಗಿದ್ದೇವೆ.
-ಶಂಕರ್‌, ಕಾರ್ಯನಿರ್ವಾಹಕ ನಿರ್ದೇಶಕ, ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.