ಬೆಂಗಳೂರು: ’ನಮ್ಮ ಮೆಟ್ರೊ‘ ಎರಡನೇ ಹಂತದ ಮೊದಲ ವಿಸ್ತರಿತ ಮಾರ್ಗ ಯಲಚೇನಹಳ್ಳಿಯಿಂದ–ಅಂಜನಾಪುರದವರೆಗೆ (ರೀಚ್–4ಬಿ) ಈ ತಿಂಗಳಾಂತ್ಯಕ್ಕೆ ಮೆಟ್ರೊ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಲಿದೆ.
‘6.29 ಕಿ.ಮೀ. ಉದ್ದದ ಈ ವಿಸ್ತರಿತ ಮಾರ್ಗದಲ್ಲಿ ಈಗಾಗಲೇ ಶೇ 90ರಷ್ಟು ಕೆಲಸ ಪೂರ್ಣಗೊಂಡಿದ್ದು, ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ರೀಚ್‌ನ ಕಾಮಗಾರಿ ಅಂತಿಮ ಹಂತದಲ್ಲಿದೆ. ಪರಿಷ್ಕೃತ ಗಡುವಿನಂತೆ ನವೆಂಬರ್ ಕೊನೆಯ ವೇಳೆಗೆ ಸಾರ್ವಜನಿಕ ಸೇವೆ ಆರಂಭವಾಗಲಿದೆ’ ಎಂದು ತಿಳಿಸಿದರು.
‘ನಿರ್ಮಾಣ ಕಾರ್ಯಗಳೆಲ್ಲವೂ ಮುಗಿದಿದ್ದು, ಅಂತಿಮ ವಿನ್ಯಾಸದ ವಾಸ್ತುಶಿಲ್ಪ ಕಾರ್ಯ ನಡೆಯುತ್ತಿದೆ. ಕೆಲವು ನಿಲ್ದಾಣಗಳಲ್ಲಿ ಕ್ಲಾಡಿಂಗ್ ಕೆಲಸ ಬಾಕಿ ಇದೆ. ಟ್ರಾಕ್ಷನ್ ಮತ್ತು ಸಿಗ್ನಲಿಂಗ್ ಕಾರ್ಯ ಪ್ರಾರಂಭವಾಗಿದೆ’ ಎಂದು ಅವರು ತಿಳಿಸಿದರು.
ನಿಲ್ದಾಣದೊಳಗೆ ಪ್ಲಾಟ್‌ಫಾರಂ, ಟಿಕೆಟ್ ಕೌಂಟರ್, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹಳಿಗಳ ಅಗಲ ಪರೀಕ್ಷೆ ನಂತರ, ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರು ಪರಿಶೀಲನೆ ನಡೆಸಿದ ನಂತರ ಮೆಟ್ರೊ ರೈಲಿನ ಪರೀಕ್ಷಾರ್ಥ ಸಂಚಾರ ಶುರುವಾಗಲಿದೆ. ರೈಲ್ವೆ ಅನುಮೋದನೆ ದೊರೆತ ನಂತರ, ಮೆಟ್ರೊ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಜುಲೈ 25ಕ್ಕೆ ಪರೀಕ್ಷಾರ್ಥ ಸಂಚಾರ ಆರಂಭವಾಗಿ, ಆಗಸ್ಟ್ 15ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೊ ರೈಲು ಸಾರ್ವಜನಿಕ ಸೇವೆಗೆ ಲಭ್ಯವಾಗಬೇಕಿತ್ತು. ಆದರೆ, ಕೊರೊನಾ ಬಿಕ್ಕಟ್ಟಿನ ನಂತರ ಕಾರ್ಮಿಕರ ಕೊರತೆಯ ಪರಿಣಾಮ, ಕಾಮಗಾರಿ ವಿಳಂಬವಾಗಿದೆ.
‘ಈ ವೇಳೆಗಾಗಲೇ ಈ ಮಾರ್ಗದಲ್ಲಿ ಮೆಟ್ರೊ ರೈಲು ಓಡಬೇಕಾಗಿತ್ತು. ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ. ಪರೀಕ್ಷಾರ್ಥ ಸಂಚಾರವಾದರೂ ಆರಂಭಿಸುತ್ತಿರುವುದು ಸಂತಸ ತಂದಿದೆ. ಆದಷ್ಟು ಬೇಗ ಸಾರ್ವಜನಿಕರಿಗೆ ಮೆಟ್ರೊ ರೈಲು ಸೇವೆ ದೊರೆಯಲಿ ಎಂದು ಆಶಿಸುತ್ತೇನೆ’ ಎಂದು ಕೋಣನಕುಂಟೆ ಕ್ರಾಸ್ ಬಳಿಯ ನಿವಾಸಿ ಡಾ. ಎ. ಭಾನು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.