ADVERTISEMENT

Namma Metro: ಕೆಂಗೇರಿ–ಚಲ್ಲಘಟ್ಟ ಮೆಟ್ರೊ: ಜೂನ್‌ನಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 21:45 IST
Last Updated 20 ಫೆಬ್ರುವರಿ 2023, 21:45 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಬಹುದಿನಗಳಿಂದ ಬಾಕಿ ಉಳಿದಿರುವ ಕೆಂಗೇರಿ–ಚಲ್ಲಘಟ್ಟ ನಡುವಿನ ಮೆಟ್ರೊ ರೈಲು ಮಾರ್ಗದ ವಿಸ್ತರಣೆ ಕಾಮಗಾರಿ ಕೊನೆಗೂ ಅಂತಿಮ ಹಂತಕ್ಕೆ ತಲುಪಿದ್ದು, ಜೂನ್‌ನಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.

ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ತನಕ ಇದ್ದ ನೇರಳೆ ಮಾರ್ಗದಲ್ಲಿ 7.5 ಕಿಲೋ ಮೀಟರ್ ವಿಸ್ತರಣೆಯನ್ನು 2021ರ ಆಗಸ್ಟ್‌ನಲ್ಲಿ ಮಾಡಲಾಗಿದ್ದು, ಸದ್ಯ ಕೆಂಗೇರಿ ತನಕ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಅದನ್ನು ಚಲ್ಲಘಟ್ಟ ತನಕ ವಿಸ್ತರಣೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. 2 ಕಿಲೋ ಮೀಟರ್ ವಿಸ್ತರಣೆ ಮಾರ್ಗ ಎರಡು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ.

ಮೆಟ್ರೊ ಯೋಜನೆಯ ಒಂದು ಮತ್ತು ಎರಡನೇ ಹಂತದಲ್ಲಿ ಚಲ್ಲಘಟ್ಟದಲ್ಲಿ ಅತ್ಯಂತ ಚಿಕ್ಕ ನಿಲ್ದಾಣ ನಿರ್ಮಾಣವಾಗುತ್ತಿದೆ. 10 ಪಿಲ್ಲರ್‌ಗಳನ್ನು ಅಳವಡಿಸಲಾಗಿದ್ದು, ನೆಲಮಹಡಿಯಲ್ಲೇ ಟಿಕೆಟ್‌ ಕೌಂಟರ್‌ಗಳು ಮತ್ತು ಮೊದಲ ಅಂತಸ್ತಿನಲ್ಲೇ ರೈಲ್ವೆ ಪ್ಲಾಟ್‌ಫಾರ್ಮ್‌ ನಿರ್ಮಾಣವಾಗಿದೆ.

ADVERTISEMENT

ಸದ್ಯ ಬಿಎಂಆರ್‌ಸಿಎಲ್‌ ಗಮನ ವೈಟ್‌ಫೀಲ್ಟ್‌ಗೆ ಮೆಟ್ರೊ ರೈಲು ಓಡಿಸುವ ಕಡೆ ಕೇಂದ್ರೀಕೃತವಾಗಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ ತನಕ ಮೆಟ್ರೊ ರೈಲುಗಳ ಸಂಚಾರ ಆರಂಭವಾದ ಬಳಿಕ ಬೇರೆ ಕಡೆ ಗಮನ ಹರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

2022ರ ಮಾರ್ಚ್‌ನಲ್ಲೇ ಚಲ್ಲಘಟ್ಟ ತನಕ ಮೆಟ್ರೊ ರೈಲುಗಳು ಸಂಚರಿಸಬೇಕಿತ್ತು. ಆದರೆ, ಭೂಸ್ವಾಧೀನ ತೊಡಕು, ನೈಸ್ ರಸ್ತೆಯ ಮೇಲೆ ಎತ್ತರಿಸಿದ ಮಾರ್ಗ ನಿರ್ಮಾಣ ಕಾಮಗಾರಿ ಸೇರಿ ಹಲವು ಕಾರಣಗಳಿಂದ ವಿಳಂಬವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

‘ಸಿಗ್ನಲಿಂಗ್, ವಿದ್ಯುದ್ದೀಕರಣ ಮತ್ತು ನಿಲ್ದಾಣಗಳಲ್ಲಿನ ಸಣ್ಣಪುಟ್ಟ ಕಾಮಗಾರಿ ಬಾಕಿ ಇದೆ. ಜೂನ್‌ನಲ್ಲಿ ಈ ಮಾರ್ಗದಲ್ಲಿ ಮೆಟ್ರೊ ರೈಲುಗಳ ವಾಣಿಜ್ಯ ಸಂಚಾರ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ಮಾರ್ಚ್‌ 15ರ ಬಳಿಕ ವೈಟ್‌ಫೀಲ್ಡ್‌ಗೆ ಮೆಟ್ರೊ

ವೈಟ್‌ಫೀಲ್ಡ್‌–ಕೆ.ಆರ್.ಪುರ ನಡುವಿನ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದ್ದು, ಮಾರ್ಚ್‌ 15ರ ನಂತರ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಂಜುಂ ಪರ್ವೇಜ್‌ ತಿಳಿಸಿದರು.

ಆ ಬಳಿಕ ಜೂನ್‌ ವೇಳೆಗೆ ಕೆ.ಆರ್‌.ಪುರ–ಬೈಯಪ್ಪನಹಳ್ಳಿ ನಡುವೆಯೂ ರೈಲುಗಳ ಸಂಚಾರ ಆರಂಭವಾಗಲಿದೆ. ಈ ವರ್ಷದ ಮಧ್ಯದಲ್ಲಿ ಚೆಲ್ಲಘಟ್ಟದಿಂದ ವೈಟ್‌ಫೀಲ್ಡ್‌ ತನಕ ನೇರಳೆ ಮಾರ್ಗದಲ್ಲಿ ರೈಲುಗಳು ಕಾರ್ಯಾಚರಣೆಗೊಳ್ಳಲಿವೆ ಎಂದರು.

ಆರ್‌.ವಿ.ರಸ್ತೆ–ಬೊಮ್ಮಸಂದ್ರ ನಡುವಿನ ಮೆಟ್ರೊ ರೈಲು ಮಾರ್ಗವೂ ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಒಟ್ಟಾರೆ ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚುವರಿ 40 ಕಿಲೋ ಮೀಟರ್‌ ಮೆಟ್ರೊ ರೈಲು ಮಾರ್ಗ ಸಾರ್ವಜನಿಕರಿಗೆ ದೊರಕಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.