ADVERTISEMENT

ನಮ್ಮ ಮೆಟ್ರೊ: ಡಿಸೆಂಬರ್‌ನಲ್ಲಿ ಪರೀಕ್ಷಾರ್ಥ ರೈಲು ಸಂಚಾರ

ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 22:25 IST
Last Updated 13 ಆಗಸ್ಟ್ 2020, 22:25 IST
ಮೈಸೂರು ರಸ್ತೆ– ಕೆಂಗೇರಿ ವಿಸ್ತರಿತ ಮೆಟ್ರೊ ಮಾರ್ಗದ ನೋಟ– ಪ್ರಜಾವಾಣಿ ಚಿತ್ರ: ಮಂಜುನಾಥ್‌ ಎಂ.ಎಸ್. 
ಮೈಸೂರು ರಸ್ತೆ– ಕೆಂಗೇರಿ ವಿಸ್ತರಿತ ಮೆಟ್ರೊ ಮಾರ್ಗದ ನೋಟ– ಪ್ರಜಾವಾಣಿ ಚಿತ್ರ: ಮಂಜುನಾಥ್‌ ಎಂ.ಎಸ್.    

ಬೆಂಗಳೂರು:‘ನಮ್ಮ ಮೆಟ್ರೊ’ಎರಡನೇ ಹಂತದಲ್ಲಿನ ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ (ರೀಚ್‌ 2) ಡಿಸೆಂಬರ್‌ನಲ್ಲಿ ಪರೀಕ್ಷಾರ್ಥ ರೈಲು ಸಂಚಾರ ನಡೆಯಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಗಳು ಹೇಳಿದ್ದಾರೆ.

‘ನಿಲ್ದಾಣಗಳ ನಿರ್ಮಾಣ ಸೇರಿದಂತೆ ಹಲವು ನಿರ್ಮಾಣ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ವಲಸೆ ಕಾರ್ಮಿಕರು ಹಿಂದಿರುಗುತ್ತಿದ್ದು, ಕಾಮಗಾರಿ ವೇಗವಾಗಿ ನಡೆಯುತ್ತಿದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ತಿಳಿಸಿದರು.

6.46 ಕಿ.ಮೀ. ಉದ್ದದ ಈ ವಿಸ್ತರಿತ ಮಾರ್ಗವು 2019ರ ಕೊನೆಯ ವೇಳೆಗೆ ಮುಕ್ತಾಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಹಲವು ಕಾರಣಗಳಿಂದ ವಿಳಂಬವಾಗಿದೆ. ಗುತ್ತಿಗೆದಾರರ ಬದಲಾವಣೆ, ಭೂಸ್ವಾಧೀನದಲ್ಲಾದ ವಿಳಂಬ ಮತ್ತು ನಂತರ ಕೊರೊನಾ ಸೋಂಕಿನ ಕಾರಣದಿಂದ ಈ ಮಾರ್ಗ ನಿರ್ಮಾಣದ ಗಡುವು ಮುಂದುವರಿಯುತ್ತಲೇ ಬಂದಿದೆ.

ADVERTISEMENT

ಫೆಬ್ರುವರಿಯಿಂದ ಸೇವೆ:ಮತ್ತೊಮ್ಮೆ ಗಡುವು ಪರಿಷ್ಕರಿಸಿರುವ ನಿಗಮವು, 2021ರ ಫೆಬ್ರುವರಿಯಲ್ಲಿ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದೆ. ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿಯವರೆಗೆ ಆರು ನಿಲ್ದಾಣಗಳು ನಿರ್ಮಾಣವಾಗಲಿವೆ. ಐಎಲ್ ಆ್ಯಂಡ್ ಎಫ್‍ಎಸ್ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್‌ ಹಾಗೂ‘ಸೋಮ’ ಕಂಪನಿಗೆ ಗುತ್ತಿಗೆ ನೀಡಲಾಗಿದೆ.

ಕಾಮಗಾರಿ ವಿವರ:ಮೊದಲ ಎರಡು ನಿಲ್ದಾಣಗಳಲ್ಲಿ ಶೇ 95ರಷ್ಟು ಕೆಲಸ ಪೂರ್ಣಗೊಂಡಿದೆ. ನೈಸ್‌ ರಸ್ತೆ ದಾಟಿ ಮುಂದಿರುವ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ.

‘ಸಿಗ್ನಲಿಂಗ್‌ ಕಾರ್ಯ ಈ ವೇಳೆಗಾಗಲೇ ಆರಂಭವಾಗಬೇಕಿತ್ತು. ತಜ್ಞರು ಮತ್ತು ಅಗತ್ಯ ಉಪಕರಣಗಳು ವಿದೇಶದಿಂದ ಬರಬೇಕಾಗಿದೆ. ಲಾಕ್‌ಡೌನ್‌ ಕಾರಣದಿಂದ ನಿಧಾನವಾಗಿದೆ. ಅಕ್ಟೋಬರ್‌ ವೇಳೆಗೆ ಸಿಗ್ನಲಿಂಗ್‌ ಕಾರ್ಯ ಪ್ರಾರಂಭವಾಗಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸದ್ಯ, ಟ್ರ್ಯಾಕ್‌ ಇಡುವ ಕಾರ್ಯ ನಡೆಯುತ್ತಿದೆ. ಆರ್‌.ವಿ. ಕಾಲೇಜು ನಿಲ್ದಾಣದಲ್ಲಿ ಗ್ರಾನೈಟ್‌ ಹಾಕಲಾಗುತ್ತಿದೆ. ಮೇಲ್ಚಾವಣಿ ಹಾಕುವ ಕಾರ್ಯ ಅಂತಿಮ ಹಂತದಲ್ಲಿದೆ.

ಈ ಮಾರ್ಗದಲ್ಲಿನ ನಿಲ್ದಾಣಗಳು

*ನಾಯಂಡಹಳ್ಳಿ

*ರಾಜರಾಜೇಶ್ವರಿ ನಗರ

*ಬೆಂಗಳೂರು ವಿಶ್ವವಿದ್ಯಾಲಯ

*ಆರ್.ವಿ.ಕಾಲೇಜು

*ಮೈಲಸಂದ್ರ

*ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.