ಬೆಂಗಳೂರು: ಕೆ.ಆರ್.ಪುರ ವೈಟ್‌ಫೀಲ್ಡ್ ನಡುವಿನ ಮೆಟ್ರೊ ರೈಲು ಮಾರ್ಗದ ಪರಿಶೀಲನೆಗೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರನ್ನು ಫೆಬ್ರುವರಿಯಲ್ಲಿ ಆಹ್ವಾನಿಸಲು ಬಿಎಂಆರ್‌ಸಿಎಲ್ ಸಜ್ಜಾಗಿದ್ದು, ಈ ಮಾರ್ಗಕ್ಕೆ ಮತ್ತೊಂದು ಹೊಸ ರೈಲನ್ನು ಸ್ಥಳಾಂತರಿಸಿದೆ.
ಆರು ಬೋಗಿಗಳನ್ನು ದೊಡ್ಡ ಟ್ರಕ್‌ಗಳಲ್ಲಿ ತರಲಾಗಿದ್ದು, ಶುಕ್ರವಾರ ಸಂಜೆ ವೈಟ್‌ಫೀಲ್ಡ್ ಡಿಪೊಗೆ ಬಂದಿವೆ. ಸದ್ಯ ಒಂದು ರೈಲು ಅಕ್ಟೋಬರ್ 21ರಿಂದಲೇ ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ.
ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್ ಮಾರ್ಗದಲ್ಲಿ ಮೊದಲ ಹಂತದಲ್ಲಿ ಕೆ.ಆರ್.ಪುರ–ವೈಟ್‌ಫೀಲ್ಡ್ ನಡುವೆ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಫೆಬ್ರುವರಿ 15ರಿಂದ 20ರ ನಡುವೆ ರೈಲು ಸುರಕ್ಷತಾ ಆಯುಕ್ತರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.
ಪರಿಶೀಲನೆ ನಡೆಸಿ ಸುರಕ್ಷತೆ ಬಗ್ಗೆ ಹಸಿರು ನಿಶಾನೆ ದೊರೆತರೆ ಕೆಲವೇ ದಿನಗಳಲ್ಲಿ ವೈಟ್‌ಫೀಲ್ಡ್–ಕೆ.ಆರ್.ಪುರ ನಡುವೆ ಮೆಟ್ರೊ ರೈಲು ಸಂಚರಿಸಲಿದೆ. ಈ ಮಾರ್ಗವನ್ನು ಬೈಯಪ್ಪನಹಳ್ಳಿ ತನಕ ಜೋಡಿಸಲು ಬೆನ್ನಿಗಾನಹಳ್ಳಿ ಬಳಿ ವೆಬ್ ಗರ್ಡರ್ ಅಳವಡಿಕೆ ಕಾಮಗಾರಿ ಸವಾಲಾಗಿದ್ದು, ಈ ಕಾಮಗಾರಿಯೂ ಈಗ ಪ್ರಗತಿಯಲ್ಲಿದೆ. ಜೂನ್ ವೇಳೆಗೆ ಈ ಮಾರ್ಗದಲ್ಲೂ ರೈಲು ಕಾರ್ಯಾಚರಣೆ ಮಾಡಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.