ಸಾವು (ಸಾಂದರ್ಭಿಕ ಚಿತ್ರ)
ಗೆಟ್ಟಿ ಚಿತ್ರ
ಪೀಣ್ಯ ದಾಸರಹಳ್ಳಿ: ಹುಸ್ಕೂರು ಗ್ರಾಮದ ಜ್ಯೋತಿ (45) ಅವರು ಶೌಚಾಲಯದಿಂದ ಹೊರಗೆ ಬಂದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರು ಮಹಿಳೆ ಧರಿಸಿದ್ದ 70 ಗ್ರಾಂ ಚಿನ್ನದ ಸರ ನಾಪತ್ತೆಯಾಗಿದೆ.
ಮೃತ ಜ್ಯೋತಿ ಅವರ ಮನೆಯ ಕಾಂಪೌಂಡ್ ಒಳಗೆ ಶೌಚಾಲಯ ಇದ್ದು, ಬೆಳಗಿನ ಜಾವ 5.30ರಲ್ಲಿ ಶೌಚಗೃಹಕ್ಕೆ ಹೋಗಿ ಹೊರಬಂದಿದ್ದಾರೆ. ಅವರ ಮೂಗು ಹಾಗೂ ಕಿವಿಯಲ್ಲಿ ರಕ್ತ ಬಂದು, ಕುಸಿದು ಬಿದ್ದಿದ್ದಾರೆ.
‘ಅಪರಿಚಿತ ವ್ಯಕ್ತಿಗಳು ಅವರ ಮುಖಕ್ಕೆ ರಾಸಾಯನಿಕ ಸ್ಪ್ರೇ ಮಾಡಿ, ಹಲ್ಲೆ ನಡೆಸಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರಬಹುದು’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು.
ಡಿಸಿಪಿ ನಾಗೇಶ್ ಮಾತನಾಡಿ, ‘ಮಹಿಳೆ ಶೌಚಾಲಯದಿಂದ ಹೊರಬಂದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಾಣುತ್ತಿಲ್ಲ. ಆದರೆ, ರಾತ್ರಿ ಅವರ ಕಿವಿ ಓಲೆಯನ್ನು ಮನೆಯಲ್ಲಿ ತೆಗೆದು ಇಟ್ಟಿದ್ದನ್ನು ಅವರ ಮಗ ನೋಡಿದ್ದಾರೆ. ಹಾಗಾಗಿ ಚಿನ್ನದ ಸರವನ್ನು ತೆಗೆದು ಇಟ್ಟಿರುವ ಸಾಧ್ಯತೆ ಇದೆ. ರಾಸಾಯನಿಕ ಸ್ಪ್ರೇ ಮಾಡಿರುವ ಬಗ್ಗೆ ಸುಳಿವಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.