ADVERTISEMENT

ನಮ್ಮ ಮೆಟ್ರೊ: ಹಳದಿ ಮಾರ್ಗದಲ್ಲಿ ಐದನೇ ರೈಲು ಸಂಚಾರ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 19:57 IST
Last Updated 31 ಅಕ್ಟೋಬರ್ 2025, 19:57 IST
ಹಳದಿ ಮಾರ್ಗದಲ್ಲಿ ಮೆಟ್ರೊ ರೈಲು
ಹಳದಿ ಮಾರ್ಗದಲ್ಲಿ ಮೆಟ್ರೊ ರೈಲು   

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿಯೇ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಐದನೇ ರೈಲು  ಸಂಚಾರ ಆರಂಭಿಸಲಿದೆ. ಈ ಮಾರ್ಗದಲ್ಲಿ ನವೆಂಬರ್‌ 1ರಿಂದ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ.

ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್‌ (ಟಿಆರ್‌ಎಸ್‌ಎಲ್‌) ಕಾರ್ಯಾಗಾರದಿಂದ ರವಾನೆಯಾಗಿದ್ದ ಐದನೇ ರೈಲಿನ ಆರು ಬೋಗಿಗಳು ಅಕ್ಟೋಬರ್‌ ಮೊದಲ ವಾರದಲ್ಲಿ ಹೆಬ್ಬಗೋಡಿ ಮೆಟ್ರೊ ಡಿಪೊಗೆ ತಲುಪಿದ್ದವು. ಇನ್‌ಸ್ಪೆಕ್ಷನ್‌ ಬೇ ಲೈನ್‌ನಲ್ಲಿ ಆರಂಭಿಕ ಪರೀಕ್ಷೆಗಳು ನಡೆದಿದ್ದವು. ಬಳಿಕ ರಾತ್ರಿ ವೇಳೆಯಲ್ಲಿ ವಾಣಿಜ್ಯ ಮಾರ್ಗದಲ್ಲಿ ಪರೀಕ್ಷಾ ಸಂಚಾರ ನಡೆಸಲಾಗಿತ್ತು.

ಆರ್‌.ವಿ. ರಸ್ತೆ–ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರ ನಡುವೆ ಆಗಸ್ಟ್‌ 11ಕ್ಕೆ ಆರಂಭವಾಗಿರುವ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಸದ್ಯ ನಾಲ್ಕು ರೈಲುಗಳು ಪ್ರತಿ 19 ನಿಮಿಷಕ್ಕೊಂದು ಟ್ರಿಪ್‌ನಂತೆ ಸಂಚರಿಸುತ್ತಿವೆ. ಐಟಿ ಹಬ್‌ ಆಗಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಈ ಮಾರ್ಗ ಹಾದು ಹೋಗುತ್ತಿರುವುದರಿಂದ ನಿರೀಕ್ಷೆ ಮೀರಿ ಪ್ರಯಾಣಿಕರು ಮೆಟ್ರೊದಲ್ಲಿ ಸಂಚರಿಸುತ್ತಿದ್ದಾರೆ.

ADVERTISEMENT

ಆರ್‌.ವಿ. ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.