ಬೆಂಗಳೂರು: ಆರ್.ವಿ.ರಸ್ತೆ –ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಆ.11ರಂದು ಪ್ರಯಾಣಿಕರಿಗಾಗಿ ರೈಲುಗಳ ಸಂಚಾರ ಆರಂಭವಾಗಲಿದ್ದು, ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಎರಡು ಟರ್ಮಿನಲ್ ಸೇರಿ ಎಲ್ಲ 16 ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 11.15ಕ್ಕೆ ಮತ್ತು ಆರ್.ವಿ.ರಸ್ತೆ ಇಂಟರ್‌ಚೇಂಜ್ ನಿಲ್ದಾಣದಿಂದ ಕೊನೆಯ ರೈಲು ರಾತ್ರಿ 11.50ಕ್ಕೆ ಹೊರಡುತ್ತದೆ. ಬೆಳಿಗ್ಗೆ 6.30 ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ಹಾಗೂ ಬೆಳಿಗ್ಗೆ 7.10 ರಿಂದ ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಪ್ರತಿ 25 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ. ರಾತ್ರಿ 10 ಗಂಟೆಯ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.
ಪ್ರತಿ ಭಾನುವಾರ ರೈಲು ಸಂಚಾರ ಬೆಳಿಗ್ಗೆ 6.30ರ ಬದಲಾಗಿ 7ಕ್ಕೆ ಪ್ರಾರಂಭವಾಗಲಿದೆ. ಹಳದಿ ಮಾರ್ಗದ ಟರ್ಮಿನಲ್ ನಿಲ್ದಾಣಗಳ ನಡುವಿನ ಪ್ರಯಾಣದ ದರ ₹ 60 ಆಗಿದೆ. ಟೋಕನ್, ಎನ್‌ಸಿಎಂಸಿ ಕಾರ್ಡ್, ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಲಭ್ಯವಿವೆ.
ಹೆಚ್ಚು ರೈಲು ಬೋಗಿಗಳು ಪೂರೈಕೆಯಾಗುತ್ತಿದ್ದಂತೆ, ರೈಲುಗಳ ಟ್ರಿಪ್ ಹೆಚ್ಚಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.