ADVERTISEMENT

ಮೆಟ್ರೊ: ಸ್ಮಾರ್ಟ್‌ಫೋನ್‌ ಇದ್ದರಷ್ಟೇ ಪ್ರಯಾಣ?

ಸೇವೆ ಪುನರಾರಂಭಕ್ಕೆ ಬಿಎಂಆರ್‌ಸಿಎಲ್‌ ಸಿದ್ಧತೆ * ಪ್ರಯಾಣಕ್ಕೆ ‘ಆರೋಗ್ಯ ಸೇತು‘ ಆ್ಯಪ್‌ ಕಡ್ಡಾಯ?

ಪ್ರವೀಣ ಕುಮಾರ್ ಪಿ.ವಿ.
Published 28 ಮೇ 2020, 19:52 IST
Last Updated 28 ಮೇ 2020, 19:52 IST
   

ಬೆಂಗಳೂರು: ಎರಡು ತಿಂಗಳಿನಿಂದ ವಾಣಿಜ್ಯ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸರ್ಕಾರದಿಂದ ಅನುಮತಿ ಸಿಕ್ಕರೆ ಜೂನ್‌ 1ರಿಂದ ಮತ್ತೆ ಪ್ರಯಾಣಿಕರಿಗೆ ಸೇವೆ ಒದಗಿಸಲು ತಾಲೀಮು ನಡೆಸುತ್ತಿದೆ. ಕಾರ್ಯಾಚರಣೆ ವೇಳೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾದರಿ ಕಾರ್ಯವಿಧಾನ (ಎಸ್‌ಒಪಿ) ತಯಾರಿಸಿರುವ ನಿಗಮವು ಅದರ ಅನುಷ್ಠಾನದ ಕುರಿತು ಅಣಕು ಕಾರ್ಯಾಚರಣೆ ನಡೆಸುವ ಮೂಲಕ ಸಿಬ್ಬಂದಿಗೆ ತರಬೇತಿ ನೀಡುತ್ತಿದೆ.

ಮೆಟ್ರೊ ಪ್ರಯಾಣಿಕರ ಮೂಲಕ ಕೊರೋನಾ ಸೋಂಕು ಹಬ್ಬುವುದನ್ನು ತಡೆಯುವ ಸಲುವಾಗಿ ಇಡೀ ಕಾರ್ಯಾಚರಣೆಯ ವಿಧಾನದಲ್ಲಿ ಗಣನೀಯ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಈ ಕುರಿತು ನಿಗಮ ಸಿದ್ಧಪಡಿಸಿರುವ ಎಸ್‌ಒಪಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಮೆಟ್ರೊದಲ್ಲಿ ಪ್ರಯಾಣಿಸಬೇಕಾದರೆ ಸ್ಮಾರ್ಟ್‌ಕಾರ್ಡ್‌ ಹಾಗೂ ಸ್ಮಾರ್ಟ್‌ಫೋನ್‌ ಹೊಂದಿರುವುದು ಕಡ್ಡಾಯವಾಗಲಿದೆ. ಸ್ಮಾರ್ಟ್‌ಫೋನ್‌ನಲ್ಲಿ ‘ಆರೋಗ್ಯ ಸೇತು’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಎಸ್‌ಒಪಿಯಲ್ಲಿ ಹೇಳಲಾಗಿದೆ.

ADVERTISEMENT

ಸ್ಮಾರ್ಟ್‌ಫೋನ್‌ ಇಲ್ಲದವರಿಗೆ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ, ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿ, ‘ಮೆಟ್ರೊ ಕಾರ್ಯಾಚರಣೆ ಬಗ್ಗೆ ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸಲೇಬೇಕು. ‘ಆರೋಗ್ಯ ಸೇತು’ ಆ್ಯಪ್‌ ಹೊಂದಿದ್ದವರಿಗೆ ಮಾತ್ರ ಮೆಟ್ರೊ ಪ್ರಯಾಣಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರ ಹೇಳಿದ್ದರಿಂದ ನಮ್ಮ ಎಸ್‌ಒಪಿಯಲ್ಲೂ ಇದನ್ನು ಅಳವಡಿಸಿಕೊಂಡಿದ್ದೇವೆ’ ಎಂದು ಉತ್ತರಿಸಿದರು.

ಟೋಕನ್‌ (ಟಿಕೆಟ್‌) ಬಳಕೆ ಇಲ್ಲ: ನಿಲ್ದಾಣಗಳಲ್ಲೂ ಟೋಕನ್‌ಗಳ ಬಳಕೆ ಸ್ಥಗಿತಗೊಳಿಸಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ನಲ್ಲಿ ಪ್ರಯಾಣಕ್ಕೆ ಅಗತ್ಯವಿರುವಷ್ಟು ಹಣ ಇದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ ರೀಚಾರ್ಜ್‌ ಅನ್ನೂ ಆನ್‌ಲೈನ್‌ನಲ್ಲೇ ಮಾಡಬೇಕು. ಮೆಟ್ರೊ ನಿಲ್ದಾಣಗಳಲ್ಲಿ ಸ್ಮಾರ್ಟ್‌ಕಾರ್ಡ್‌ಗೆ ಹಣ ತುಂಬಿಸಲು ಅವಕಾಶ ಇದೆ. ಆದರೆ, ನಗದು ಹಾಗೂ ಎಟಿಎಂ ಕಾರ್ಡ್‌ ಬಳಸಿ ತುಂಬಿಸುವಂತಿಲ್ಲ. ಯಾವುದೇ ಸಂಪರ್ಕ ಇಲ್ಲದೇ ರೀಚಾರ್ಜ್‌ ಮಾಡುವ ಯುಪಿಐ ಆ್ಯಪ್‌, ಪೇಟಿಎಂ ಅಥವಾ ಕ್ಯುಆರ್‌ ಕೋಡ್‌ ಬಳಸಿ ಕಾರ್ಡ್‌ಗೆ ಹಣ ತುಂಬಿಸಬಹುದು.

ಫ್ಲ್ಯಾಟ್‌ಫಾರ್ಮ್‌ಗೆ ಪ್ರವೇಶ ಕಲ್ಪಿಸುವ ಎಎಫ್‌ಸಿ ಗೇಟ್‌ನಲ್ಲಿರುವ ಸ್ಮಾರ್ಟ್‌ಕಾರ್ಡ್‌ ಅನ್ನು ರೀಡರ್‌ ಯಂತ್ರಕ್ಕೆ ತಾಗಿಸುವಂತಿಲ್ಲ. ಕಾರ್ಡ್‌ ಅನ್ನು 3 ಸೆಂ.ಮೀ ದೂರದಲ್ಲಿ ಹಿಡಿಯಬೇಕು. ಆಗ ಗೇಟ್‌ ತೆರೆದುಕೊಳ್ಳಲಿದೆ.

ಸ್ವಚ್ಛತೆಗೆ ನಿಗಮ ಆದ್ಯತೆ

*ನಿಲ್ದಾಣವನ್ನು ಪ್ರತಿ 4 ಗಂಟೆಗೊಮ್ಮೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲಾಗುತ್ತದೆ

*ಎಎಫ್‌ಸಿ ಗೇಟ್‌, ಎಸ್ಕಲೇಟರ್‌ಗಳ ರೇಯ್ಲಿಂಗ್‌ಗಳನ್ನು ಆಗಾಗ್ಗೆ ಶುಚಿಗೊಳಿಸಲಾಗುತ್ತದೆ.

*ಸ್ಕ್ಯಾನಿಂಗ್‌ ಯಂತ್ರ ಮತ್ತು ಲೋಹಶೋಧಕಗಳನ್ನು ಪ್ರತಿ 2 ತಾಸುಗಳಿಗೊಮ್ಮೆ ಶುಚಿಗೊಳಿಸಲಾಗುತ್ತದೆ

*ಓಡಾಟ ಆರಂಭಿಸುವ ಮುನ್ನ ಇಡೀ ರೈಲನ್ನು ಸೋಡಿಯಂ ಹೈಪೊಕ್ಲೋರೈಟ್‌ ದ್ರಾವಣ ಬಳಸಿ ಸ್ವಚ್ಛಗೊಳಿಸಲಾಗುತ್ತದೆ.

ಪ್ರಯಾಣಿಕರು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?

* ಪ್ರಯಾಣಿಕರು ಕಡ್ಡಾಯವಾಗಿ ಮುಖಗವಸು (ಮಾಸ್ಕ್‌) ಧರಿಸಬೇಕು

* ನಿಲ್ದಾಣದ ಪ್ರವೇಶದ್ವಾರದಲ್ಲಿ ಇಟ್ಟಿರುವ ಸೋಂಕುನಿವಾರಕ ದ್ರಾವಣ (ಸ್ಯಾನಿಟೈಸರ್‌) ಬಳಸಿ ಕೈತೊಳೆಯಬೇಕು

* ದೇಹದ ಉಷ್ಣಾಂಶ ಪರೀಕ್ಷೆಗೆ ಸಹಕರಿಸಬೇಕು. 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶ ಕಂಡುಬಂದರೆ ನಿಲ್ದಾಣ ಪ್ರವೇಶಕ್ಕೆ ಅವಕಾಶವಿಲ್ಲ

* ಒಂದು ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕಾಗಿ ಒಂದು ದ್ವಾರವನ್ನು ಮಾತ್ರ ತೆರೆಯಲಾಗುತ್ತದೆ.

* ಪ್ರವೇಶ ದ್ವಾರ, ವೈಯಕ್ತಿಕ ತಪಾಸಣೆಗೊಳಗಾಗುವ ಪ್ರದೇಶ, ಟಿಕೆಟ್‌ ಕೌಂಟರ್‌, ಗ್ರಾಹಕರ ಸೇವಾಕೇಂದ್ರ, ಎಎಫ್‌ಸಿ ಗೇಟ್‌, ಲಿಫ್ಟ್‌, ಎಸ್ಕಲೇಟರ್‌, ಫ್ಲ್ಯಾಟ್‌ಫಾರ್ಮ್‌ ಪ್ರದೇಶಗಳಲ್ಲೆಲ್ಲಾ ಅಂತರ ಕಾಪಾಡುವುದು ಕಡ್ಡಾಯ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.