ಬೆಂಗಳೂರು: ರಾಜ್ಯದಲ್ಲಿ ಅಮೂಲ್ ಹಾಲು, ಮೊಸರು ಮಾರಾಟ ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಅಮೂಲ್ ಉತ್ಪನ್ನಗಳನ್ನು ಎಸೆದು ಸೋಮವಾರ ಪ್ರತಿಭಟನೆ ನಡೆಸಿದರು.
ಅಮೂಲ್ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ, ಬೆಣ್ಣೆ ಉತ್ಪನ್ನಗಳನ್ನು ರಸ್ತೆಗೆ ಎಸೆದ ಪ್ರತಿಭಟನಕಾರರು ಯಾವುದೇ ಕಾರಣಕ್ಕೂ ಅಮೂಲ್ ಹಾಲು-ಮೊಸರು ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ ಹಾಗೂ ಅಮೂಲ್ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಅಮೂಲ್ ವ್ಯವಸ್ಥಾಪಕ ನಿರ್ದೇಶಕರ ಪ್ರತಿಕೃತಿಗೆ ಬೆಂಕಿ ಆಕ್ರೋಶ ಹೊರಹಾಕಿದರು. ಬಳಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
‘ಅಮೂಲ್ ಸಂಸ್ಥೆ ಕನ್ನಡಿಗರ ಭಾವನೆಗಳ ಜತೆಗೆ ಚೆಲ್ಲಾಟವಾಡುತ್ತಿದೆ. ಕನ್ನಡಿಗರು ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎಫ್ (ನಂದಿನಿ) ಅನ್ನು ಅಮೂಲ್ ನಾಶ ಮಾಡಲು ಮುಂದಾಗಿದೆ. ಇದಕ್ಕೆ ರಾಜ್ಯದ ಜನರು ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರವು ನಂದಿನಿಯನ್ನು ಅಮೂಲ್ ಜತೆಗೆ ವಿಲೀನಗೊಳಿಸಲು ಯತ್ನಿಸುತ್ತಿದೆ. ಈ ಪ್ರಯತ್ನ ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ’ ಎಂದು ವೇದಿಕೆ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ ಎಚ್ಚರಿಸಿದರು.
ಯುವ ಘಟಕದ ರಾಜ್ಯ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ ಅವರು, ಅಮೂಲ್ ಹಠಮಾರಿತನದೊಂದಿಗೆ ಹಾಲು-ಮೊಸರು ವ್ಯಾಪಾರ ಮುಂದುವಸಿದರೆ ಕರ್ನಾಟಕದಲ್ಲಿ ಅಮೂಲ್‌ನ ಎಲ್ಲ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರವು ಪೊಲೀಸರನ್ನು ಮುಂದೆ ಬಿಟ್ಟು ಬಂಧಿಸಿದೆ. ದೌರ್ಜನ್ಯವನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ. ರಾಜ್ಯದ ಮೂಲೆಮೂಲೆಗಳಲ್ಲೂ ಹೋರಾಟ ಮೊಳಗಲಿದೆ ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ಹೇಳಿದರು.
ಶ್ವೇತಾ ಮೋಹನ್, ಗೋಮೂರ್ತಿ ಯಾದವ್, ವೀರಭದ್ರ, ಕುಮಾರ್ (ಆಟೋ ಘಟಕ), ಕೆ.ಪಿ.ನರಸಿಂಹ, ಕಾರ್ತಿಕ್, ಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.