
ಬೆಂಗಳೂರು: ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದು ಪತ್ತೆ ಆಗಿದ್ದು, ಸಿಸಿಬಿ ವಿಶೇಷ ವಿಚಾರಣಾ ದಳ ಹಾಗೂ ಕೆಎಂಎಫ್ ಜಾಗೃತ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೆಎಂಎಫ್‌ನ (ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ) ಉತ್ಪನ್ನಗಳ ವಿತರಕ ಮಹೇಂದ್ರ ಹಾಗೂ ಕೃತ್ಯಕ್ಕೆ ಬೆಂಬಲ ನೀಡಿದ್ದ ದೀಪಕ್, ಮುನಿರಾಜು, ಅಭಿ ಅರಸು ಬಂಧಿತರು.
ಬಂಧಿತರಿಂದ ₹1.26 ಕೋಟಿ ಮೌಲ್ಯದ 8,136 ಲೀಟರ್ ನಂದಿನಿ ಬ್ರ್ಯಾಂಡ್‌ನ ಕಲಬೆರಕೆ ತುಪ್ಪ ಹಾಗೂ ಪೂರೈಕೆ ಮಾಡುತ್ತಿದ್ದ ನಾಲ್ಕು ವಾಹನಗಳು, ಕಲಬೆರಕೆ ತುಪ್ಪ ತಯಾರಿಸಲು ಬಳಸುತ್ತಿದ್ದ ಯಂತ್ರಗಳು, ತೆಂಗು ಹಾಗೂ ಪಾಮ್ ಎಣ್ಣೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಖಚಿತ ಮಾಹಿತಿ ಆಧರಿಸಿ, ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿ ಇರುವ ಕೃಷ್ಣ ಎಂಟರ್‌ಪ್ರೈಸಸ್ ಮಾಲೀಕರಿಗೆ ಸೇರಿದ ಗೋದಾಮು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ದಾಸ್ತಾನು ಮಾಡಿಕೊಂಡಿದ್ದ ಕಲಬೆರಕೆ ತುಪ್ಪ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ವಿತರಕ ಮಹೇಂದ್ರ ಎಂಬಾತ ಶುದ್ಧ ನಂದಿನಿ ತುಪ್ಪವನ್ನು ಖರೀದಿಸಿ ತಮಿಳುನಾಡಿಗೆ ಕಳುಹಿಸುತ್ತಿದ್ದ. ತಮಿಳುನಾಡಿನಲ್ಲಿ ಕಲಬೆರಕೆ ಮಾಡಲಾಗುತ್ತಿತ್ತು. ಒಂದು ಲೀಟರ್ ತುಪ್ಪಕ್ಕೆ ನಾಲ್ಕು ಲೀಟರ್ ನಕಲಿ ತುಪ್ಪ ಬೆರೆಸುತ್ತಿದ್ದರು. ಪಾಮ್ ಹಾಗೂ ತೆಂಗಿನ ಎಣ್ಣೆ ಮತ್ತು ಡಾಲ್ಡಾ ಮಿಶ್ರಣ ಮಾಡಿ ಮತ್ತೆ ರಾಜ್ಯಕ್ಕೆ ತಂದು ಮಾರಾಟ ಮಾಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.
‘ಕಲಬೆರಕೆ ತುಪ್ಪವನ್ನು ತಮಿಳುನಾಡಿನ ಸ್ಥಳವೊಂದರಲ್ಲಿ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ ಬೆಂಗಳೂರಿನ ಅಧಿಕೃತ ಪರವಾನಗಿ ಪಡೆದಂತಹ ಮಳಿಗೆಗಳಿಗೆ ಆರೋಪಿಗಳು ಪೂರೈಕೆ ಮಾಡುತ್ತಿದ್ದರು. ಕಲಬೆರಕೆ ತುಪ್ಪದ ಸ್ಯಾಚೆಟ್ ಹಾಗೂ ಬಾಟಲಿಗಳನ್ನು ಅಸಲಿ ತುಪ್ಪದ ಪ್ಯಾಕ್‌ಗಳ ಮಾದರಿಯಲ್ಲೇ ತಯಾರಿಸಿದ್ದರು. ನಗರದ ವಿವಿಧ ಸಗಟು, ಚಿಲ್ಲರೆ ಹಾಗೂ ನಂದಿನಿ ಪಾರ್ಲರ್‌ಗಳಿಗೆ ಮೂಲ ನಂದಿನಿ ತುಪ್ಪದ ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಈ ದಂಧೆಯಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದೆ. ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ತಿರುಪ್ಪೂರು ಎಂಬಲ್ಲಿ ಆರೋಪಿಗಳು ಕಲಬೆರಕೆ ತುಪ್ಪ ತಯಾರಿಕೆ ಘಟಕ ಸ್ಥಾಪಿಸಿದ್ದರು -ಸೀಮಾಂತ್‌ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ಆತಂಕ ಬೇಡ: ಶಿವಸ್ವಾಮಿ
‘ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿಯೊಬ್ಬ ಕೆಎಂಎಫ್ ಉತ್ಪನ್ನಗಳ ವಿತರಕ ಎಂಬುದು ಗೊತ್ತಾಗಿದೆ. ಅಧಿಕೃತವಾಗಿ ಪೂರೈಸುತ್ತಿದ್ದ ತುಪ್ಪವನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪಾಮ್ ಹಾಗೂ ತೆಂಗಿನ ಎಣ್ಣೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ಅಧಿಕೃತ ಮಾರಾಟ ಮಳಿಗೆಯಲ್ಲಿ ಈ ಕಲಬೆರಕೆ ತುಪ್ಪ ಮಾರಾಟ ಮಾಡಲಾಗುತ್ತಿತ್ತೇ ಎಂಬುದರ ಕುರಿತೂ ಪರಿಶೀಲನೆ ನಡೆಸುತ್ತೇವೆ. ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ಶುದ್ಧ ತುಪ್ಪವನ್ನು ಕೆಎಂಎಫ್ ಪೂರೈಸುತ್ತಿದೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ತಿಳಿಸಿದರು.
2018ರಿಂದಲೂ ಕೃತ್ಯ
‘ಕೆಎಂಎಫ್ ಜಾಗೃತ ದಳದಿಂದ ಮಾಹಿತಿ ಬಂದಿತ್ತು. ಆ ಮಾಹಿತಿ ಆಧರಿಸಿ ತಮಿಳುನಾಡು ಹಾಗೂ ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಕ್ರಮ ವಹಿಸಲಾಗಿದೆ. 2018ರಿಂದಲೂ ಆರೋಪಿಗಳು ದಂಧೆಯಲ್ಲಿ ತೊಡಗಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.