ADVERTISEMENT

ನಂದಿನಿ ತುಪ್ಪ ಲೀಟರ್‌ಗೆ ₹90 ದುಬಾರಿ: ಬೆಣ್ಣೆ ದರವೂ ಕೆ.ಜಿಗೆ ₹38 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 15:51 IST
Last Updated 5 ನವೆಂಬರ್ 2025, 15:51 IST
ನಂದಿನಿ ಶುದ್ಧ ತುಪ್ಪ
ನಂದಿನಿ ಶುದ್ಧ ತುಪ್ಪ   

ಬೆಂಗಳೂರು: ಒಂದೂವರೆ ತಿಂಗಳ ಹಿಂದೆಯಷ್ಟೇ ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್‌) ದಸರಾ, ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ತುಪ್ಪ, ಬೆಣ್ಣೆಯ ದರವನ್ನು ದಿಢೀರನೇ ಏರಿಕೆ ಮಾಡಿದೆ.

ಬುಧವಾರದಿಂದಲೇ ಜಾರಿಗೆ ಬರುವಂತೆ ಪ್ರತಿ ಲೀಟರ್ ತುಪ್ಪದ ದರ ₹90 ಹೆಚ್ಚಳವಾಗಿದೆ. ಪ್ರತಿ ಕೆ.ಜಿ ಬೆಣ್ಣೆ ದರವನ್ನು ₹38 ಹೆಚ್ಚಿಸಿದ್ದು, ನ.7ರಿಂದ ಇದು ಜಾರಿಗೆ ಬರಲಿದೆ. 

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತ ಮಾಡಿದ್ದರಿಂದ ಒಂದೂವರೆ ತಿಂಗಳ ಹಿಂದೆ ತುಪ್ಪ ಹಾಗೂ ನಂದಿನಿ ಉತ್ಪನ್ನಗಳ ದರವನ್ನು ಶೇ 7ರಷ್ಟು ಇಳಿಕೆ ಮಾಡಲಾಗಿತ್ತು. ಈಗ ತುಪ್ಪ ದರವನ್ನು ಶೇ 15ರಷ್ಟು, ಬೆಣ್ಣೆ ದರ ಶೇ 6ರಷ್ಟು ಹೆಚ್ಚಿಸಲಾಗಿದೆ. 

ADVERTISEMENT

ಪ್ರತಿ ಲೀಟರ್‌ ಪ್ಯಾಕೆಟ್‌ ನಂದಿನಿ ತುಪ್ಪದ ದರ ಸದ್ಯ ₹610 ಇತ್ತು. ಈಗ ₹700 ಆಗಿದೆ. ಅರ್ಧ ಲೀಟರ್ ತುಪ್ಪದ ದರವನ್ನು ₹305 ರಿಂದ ₹350ಕ್ಕೆ ಹೆಚ್ಚಿಸಲಾಗಿದೆ. 12 ಎಂಎಲ್‌ ಪ್ಯಾಕೆಟ್‌, 50, 100, 200 ಮಿಲಿ ಲೀಟರ್‌ ಪ್ಯಾಕೆಟ್‌ ಹಾಗೂ ಪೆಟ್‌ ಜಾರ್‌, ಅರ್ಧ ಹಾಗೂ ಒಂದು ಲೀಟರ್ ಪ್ಯಾಕೆಟ್‌, ಪೆಟ್‌ ಜಾರ್‌, 5 ಲೀಟರ್ ಹಾಗೂ 15 ಕೆಜಿ ತುಪ್ಪದ ಟಿನ್‌, ಪ್ಯಾಕೆಟ್‌, ಪೆಟ್‌ಜಾರ್‌ ದರದಲ್ಲೂ ಹೆಚ್ಚಳವಾಗಿದೆ.

ನಂದಿನಿ ಬೆಣ್ಣೆ ದರವನ್ನು ಒಂದು ಕೆ.ಜಿಗೆ ₹572 ರಿಂದ ₹610ಕ್ಕೆ, ಅರ್ಧ ಕೆ.ಜಿ ಬೆಣ್ಣೆ ದರವನ್ನು ₹286ರಿಂದ ₹310ಕ್ಕೆ ಏರಿಕೆ ಮಾಡಲಾಗಿದೆ.‌

ನಂದಿನಿ ತುಪ್ಪದ ದರ ಏರಿಕೆಯಿಂದ ಹೋಟೆಲ್‌ ಹಾಗೂ ಬೇಕರಿ ಉತ್ಪನ್ನಗಳ ದರದಲ್ಲೂ ಏರಿಕೆಯಾಗುವ ಅಂದಾಜಿದೆ. 

ಕೆಎಂಎಫ್‌ ಸದ್ಯ ಪ್ರತಿ ತಿಂಗಳು 3,000 ಮೆಟ್ರಿಕ್‌ ಟನ್‌ ನಂದಿನಿ ತುಪ್ಪ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ತುಪ್ಪದ ದರ ಹೆಚ್ಚಳದಿಂದ ವಾರ್ಷಿಕ ₹300 ಕೋಟಿಗೂ ಅಧಿಕ ಆದಾಯ ಮಹಾಮಂಡಳಕ್ಕೆ ಬರುವ ನಿರೀಕ್ಷೆಯಿದೆ.

‘ಹಾಲು ಒಕ್ಕೂಟಗಳ ಕಾರ್ಯನಿರ್ವಾಹಕ ನಿರ್ದೇಶಕರೊಂದಿಗೆ ನಡೆದ ಸಭೆಯಲ್ಲಿ ನಂದಿನಿ ತುಪ್ಪ ಹಾಗೂ ಬೆಣ್ಣೆ ದರ ಪರಿಷ್ಕರಣೆ ಮಾಡುವ ನಿರ್ಧಾರ ಮಾಡಲಾಗಿದೆ’ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ತಿಳಿಸಿದ್ದಾರೆ.

‘ಏರಿಕೆ ನಂತರವೂ ಖಾಸಗಿಗಿಂತ ಕಡಿಮೆ’

‘ಖಾಸಗಿ ಕಂಪನಿಗಳ ಪ್ರತಿ ಕೆಜಿ ತುಪ್ಪದ ದರ ₹ 800 ವರೆಗೂ ಇದೆ. ನಂದಿನಿ ತುಪ್ಪದ ಬೆಲೆ  ಮೊದಲಿನಿಂದಲೂ ಖಾಸಗಿಗಿಂತ ಕಡಿಮೆ ಇದೆ. ದರ ಏರಿಕೆ ನಂತರವೂ ಖಾಸಗಿ ಕಂಪನಿಗಳ ತುಪ್ಪಕ್ಕಿಂತ ನಂದಿನಿ ತುಪ್ಪದ ಬೆಲೆ ಕಡಿಮೆಯೇ ಇದೆ’ ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‌ದರ ಏರಿಕೆ ಏಕೆ ?

13 ಹಾಲು ಒಕ್ಕೂಟಗಳಲ್ಲಿ ಪ್ರತಿ ದಿನ 1 ಕೋಟಿ ಲೀಟರ್‌ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಇದರಲ್ಲಿ 70 ಲಕ್ಷ ಲೀಟರ್ ಹಾಲು ಮಾರಾಟವಾದರೆ 8 ಲಕ್ಷ ಲೀಟರ್ ಹಾಲು ಕ್ಷೀರ ಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ. 5 ಲಕ್ಷ ಲೀಟರ್‌ನಲ್ಲಿ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರತಿ ನಿತ್ಯ ಸುಮಾರು 15 ಲಕ್ಷ ಲೀಟರ್‌ ಹಾಲನ್ನು ಬೆಣ್ಣೆ ತುಪ್ಪ ತಯಾರಿಸಲು ಬಳಕೆ ಮಾಡಲಾಗುತ್ತಿದೆ. ‘ಕೆಲವು ಒಕ್ಕೂಟಗಳ ಹಾಲು ಸಂಗ್ರಹ ಪ್ರಮಾಣ ಹೆಚ್ಚಿದ್ದರೂ ಮಾರಾಟ ಪ್ರಮಾಣ ಕಡಿಮೆಯಿದೆ. 2025ರ ಏಪ್ರಿಲ್‌ನಿಂದಲೂ ನಿರಂತರವಾಗಿ ಇದೇ ರೀತಿ ಹಾಲು ಸಂಗ್ರಹಣೆ ಆಗುತ್ತಿರುವುದರಿಂದ ರೈತರಿಗೆ ನೀಡುವ ಹಾಲಿನ ದರ ಹಾಗೂ ಸಹಾಯಧನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಆರ್ಥಿಕ ಹೊಂದಾಣಿಕೆಗೆ ತುಪ್ಪ ಹಾಗೂ ಬೆಣ್ಣೆ ದರ ಏರಿಕೆ ಮಾಡಲಾಗಿದೆ’ ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.