ADVERTISEMENT

ಕೆಲಸಕ್ಕಿದ್ದ ಮಳಿಗೆಯ ಚಿನ್ನಾಭರಣ ಕದ್ದ; ಪೊಲೀಸರಿಗೆ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 13:32 IST
Last Updated 13 ಜೂನ್ 2020, 13:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ತಾನು ಕೆಲಸಕ್ಕಿದ್ದ ಚಿನ್ನಾಭರಣ ಮಳಿಗೆಯ ಆಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದ ಉತ್ತಮ್ ದೋಲಾಯಿ (37) ಎಂಬಾತ ನಂದಿನಿ ಲೇಔಟ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

‘ಪಶ್ಚಿಮ ಬಂಗಾಳದ ಮೆದಲಿಪುರದ ಉತ್ತಮ್, ಜೂನ್ 8ರಂದು ಕಂಠೀರವ್ ಸ್ಟುಡಿಯೋ ಮುಖ್ಯರಸ್ತೆಯ ಆಭರಣ ಮಳಿಗೆಯೊಂದರ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ಗಳಾದ ಸುಭಾಷ್ ಹಾಗೂ ಉಮೇಶ್‌, ಆರೋಪಿಯನ್ನು ಹಿಡಿದುಕೊಂಡು ವಿಚಾರಿಸಿದಾಗಲೇ ಆತನ ಕೃತ್ಯ ಬಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಲಸ ಹುಡುಕಿಕೊಂಡು ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿ, ಮೈಸೂರು ರಸ್ತೆಯ ಕಸ್ತೂರ್ ಬಾ ನಗರದಲ್ಲಿ ವಾಸವಿದ್ದ. ಕಬ್ಬನ್ ಪೇಟೆಯ ಎಸ್‌.ಕೆ. ಜ್ಯುವೆಲರ್ಸ್ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದ. ಚಿನ್ನದ ಗಟ್ಟಿಗಳನ್ನು ಅಕ್ಕಸಾಲಿಗರ ಬಳಿ ತೆಗೆದುಕೊಂಡು ಹೋಗಿ ಆಭರಣ ಮಾಡಿಸಿಕೊಂಡು ಬರುವ ಜವಾಬ್ದಾರಿಯನ್ನು ಆತನಿಗೆ ನೀಡಲಾಗಿತ್ತು.’

ADVERTISEMENT

‘ಇತ್ತೀಚೆಗೆ ಆಭರಣ ಸಮೇತ ಆರೋಪಿ ಪರಾರಿಯಾಗಿದ್ದ. ಅದೇ ಆಭರಣಗಳನ್ನು ಮಾರಲೆಂದು ಕಂಠೀರವ್ ಸ್ಟುಡಿಯೋ ಬಳಿಯ ಮಳಿಗೆಯೊಂದಕ್ಕೆ ಬಂದಿದ್ದ. ಅವಾಗಲೇ ಕಾನ್‌ಸ್ಟೆಬಲ್‌ಗಳಿಗೆ ಸಿಕ್ಕಿಬಿದ್ದ. ಆತನಿಂದ ₹45.06 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.