ADVERTISEMENT

ಎಂಟು ಯುವತಿಯರಿಗೆ ವಂಚಿಸಿದ್ದು ಪತ್ತೆ

ಸಿನಿಮಾ, ಜಾಹೀರಾತಿನಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷ * ಹಣ ಪಡೆದು ಪರಾರಿಯಾಗುತ್ತಿದ್ದವ ಬಂಧನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 19:51 IST
Last Updated 29 ಆಗಸ್ಟ್ 2019, 19:51 IST
ಸತೀಶ್
ಸತೀಶ್   

ಬೆಂಗಳೂರು: ಸಿನಿಮಾ, ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಬಂಧಿಸಲಾಗಿರುವ ಸತೀಶ್‌ ಅಲಿಯಾಸ್ ನಿಖಿಲ್‌ಗೌಡ ಎಂಬಾತ, ಇದುವರೆಗೂ ಎಂಟು ಯುವತಿಯರಿಗೆ ವಂಚಿಸಿದ್ದಾನೆಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಹೆಸರುಘಟ್ಟ ರಸ್ತೆಯ ಕಿರ್ಲೊಸ್ಕರ್‌ ಲೇಔಟ್ ನಿವಾಸಿ ಸತೀಶ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದ ನಂದಿನಿ ಲೇಔಟ್ ಪೊಲೀಸರು, ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಆತನಿಂದ ವಂಚನೆಗೀಡಾಗಿರುವ ಯುವತಿಯರಿಂದಲೂ ಹೇಳಿಕೆ ಪಡೆದಿದ್ದಾರೆ.

‘ನಟಿ ಹಾಗೂ ರೂಪದರ್ಶಿ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದ ಯುವತಿಯರನ್ನೇ ಗುರಿಯಾಗಿಸಿಕೊಂಡು ಆರೋಪಿ ಕೃತ್ಯ ಎಸಗುತ್ತಿದ್ದ. ಆತನನ್ನು ಬಂಧಿಸುತ್ತಿದ್ದಂತೆ ಎಂಟು ಯುವತಿಯರು ಮಾತ್ರ ಹೇಳಿಕೆ ಕೊಟ್ಟಿದ್ದಾರೆ. ವಂಚನೆಗೀಡಾದ ಯುವತಿಯರ ಸಂಖ್ಯೆ ಹೆಚ್ಚಿದ್ದು, ಹಲವರು ಹೇಳಿಕೆ ನೀಡಲೂ ಹಿಂಜರಿಯುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ADVERTISEMENT

ನಾನಾ ಹೆಸರು ಬಳಕೆ: ‘ಫೇಸ್‌ಬುಕ್ ಹಾಗೂ ಇನ್‌ಸ್ಟ್ರಾಗ್ರಾಂ ಮೂಲಕವೇ ಆರೋಪಿ, ಯುವತಿಯರನ್ನು ಸಂಪರ್ಕಿಸುತ್ತಿದ್ದ. ಅದಕ್ಕಾಗಿ ನಿಖಿಲ್‌ಗೌಡ, ಸತೀಶ್, ಸಂಜಯ್ ಹಾಗೂ ಇತರೆ ಹೆಸರುಗಳಲ್ಲಿ ನಕಲಿ ಖಾತೆಗಳನ್ನೂ ತೆರೆದಿದ್ದ’ ಎಂದು ಮೂಲಗಳು ಹೇಳಿವೆ.

‘ಖಾತೆಗಳ ಪ್ರೊಫೈಲ್‌ಗಳಿಗೆ ನಟರು ಹಾಗೂ ಮಾಡೆಲ್‌ಗಳ ಫೋಟೊ ಅಪ್‌ಲೋಡ್‌ ಮಾಡುತ್ತಿದ್ದ. ಖ್ಯಾತ ರೂಪದರ್ಶಿಯರು ಹಾಗೂ ನಟಿಯರ ಫೋಟೊಶೂಟ್ ವಿಡಿಯೊಗಳನ್ನೂ ತನ್ನ ಖಾತೆಯಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ. ತಾನೇ ಫೋಟೊಶೂಟ್‌ಗಳನ್ನು ಮಾಡಿಸಿರುವುದಾಗಿ ಯುವತಿಯರಿಗೆ ಹೇಳಿ ನಂಬಿಸುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.

‘ಅವಕಾಶದ ಆಮಿಷವೊಡ್ಡಿ ಹಣ ಪಡೆಯುತ್ತಿದ್ದ ಆರೋಪಿ, ಯುವತಿಯರಿಗೆ ಅನುಮಾನ ಬರುತ್ತಿದ್ದಂತೆ ಖಾತೆಗಳನ್ನೂ ಬ್ಲಾಕ್ ಮಾಡುತ್ತಿದ್ದ. ಮೊಬೈಲ್ ಸಹ ಸ್ವಿಚ್ ಆಫ್‌ ಮಾಡುತ್ತಿದ್ದ. ಮರ್ಯಾದೆಗೆ ಅಂಜಿ ಯುವತಿಯರೂ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ’ ಎಂದು ಮೂಲಗಳು ಹೇಳಿವೆ.

‘ಇತ್ತೀಚೆಗೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಯುವತಿಗೇ ಆರೋಪಿ ವಂಚಿಸುತ್ತಿದ್ದ. ಅವರು ನೀಡಿದ್ದ ದೂರಿನಿಂದಲೇ ನಮಗೆ ಸಿಕ್ಕಿಬಿದ್ದ’ ಎಂದೂ ಮೂಲಗಳು ತಿಳಿಸಿವೆ.

ವಿಚ್ಛೇದನ ನೀಡಿದ್ದ ಪತ್ನಿ: ‘ಆರೋಪಿ ಸತೀಶ್‌ಗೆ ಮದುವೆ ಆಗಿದೆ. ಆತನ ಕಿರುಕುಳದಿಂದ ಬೇಸತ್ತ ಪತ್ನಿ, ವಿಚ್ಛೇದನ ನೀಡಿದ್ದಾರೆ. ಆತ ಯುವತಿಯರಿಗೆ ವಂಚಿಸುತ್ತಿದ್ದ ಸಂಗತಿ ಮಾತ್ರ ಪತ್ನಿಗೆ ಗೊತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.

ಖಾತೆ ಬ್ಲಾಕ್‌ ಮಾಡುತ್ತಿದ್ದ...

‘ಅವಕಾಶದ ಆಮಿಷವೊಡ್ಡಿ ಹಣ ಪಡೆಯುತ್ತಿದ್ದ ಆರೋಪಿ, ಯುವತಿಯರಿಗೆ ಅನುಮಾನ ಬರುತ್ತಿದ್ದಂತೆ ಖಾತೆಗಳನ್ನೂ ಬ್ಲಾಕ್ ಮಾಡುತ್ತಿದ್ದ. ಮೊಬೈಲ್ ಸಹ ಸ್ವಿಚ್ ಆಫ್‌ ಮಾಡುತ್ತಿದ್ದ. ಮರ್ಯಾದೆಗೆ ಅಂಜಿ ಯುವತಿಯರೂ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ’ ಎಂದು ಮೂಲಗಳು ಹೇಳಿವೆ.

‘ಇತ್ತೀಚೆಗೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಯುವತಿಗೇ ಆರೋಪಿ ವಂಚಿಸುತ್ತಿದ್ದ. ಅವರು ನೀಡಿದ್ದ ದೂರಿನಿಂದಲೇ ನಮಗೆ ಸಿಕ್ಕಿಬಿದ್ದ’ ಎಂದೂ ಮೂಲಗಳು ತಿಳಿಸಿವೆ.

ದೂರು ನೀಡಿ

ನಂದಿನಿ ಲೇಔಟ್ ಪೊಲೀಸ್ ಠಾಣೆ: 080–2294 2539,94808 01317

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.