ADVERTISEMENT

ಕನ್ನಡ ಅಸ್ಮಿತೆ ಮೇಲಿನ ದಾಳಿ ಹೆಚ್ಚಳ: ಟಿ.ಎ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:28 IST
Last Updated 25 ಜನವರಿ 2021, 19:28 IST
ಟಿ.ಎ ನಾರಾಯಣಗೌಡ
ಟಿ.ಎ ನಾರಾಯಣಗೌಡ    

ಬೆಂಗಳೂರು: ’ಸಾಹಿತಿಗಳು, ಕಲಾವಿದರು, ಪತ್ರಕರ್ತರು ವ್ಯವಸ್ಥೆಯ ವಿರುದ್ಧ‌ ಧ್ವನಿ ಎತ್ತಲು ಹೆದರುವ ಅಗತ್ಯವಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ನಿಮ್ಮೊಂದಿಗೆ ಇರುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು.

ಸಾಹಿತಿ ಹಂಪ ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ ಪ್ರಕರಣ‌ ವಿರೋಧಿಸಿ ಕರ್ನಾಟಕ‌ ರಕ್ಷಣಾ ವೇದಿಕೆ ಸೋಮವಾರ ಆಯೋಜಿಸಿದ್ದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

‘ಹಂಪನಾ ಅವರ ಮೇಲೆ ನಡೆದಿರುವುದು ಮಾನಸಿಕ ಭಯೋತ್ಪಾದನೆ. ಸಾಹಿತಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಲು ಸ್ವತಂತ್ರರು. ಅವರ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ. ಬೆದರಿಸುವ ಶಕ್ತಿಗಳನ್ನು ಎದುರಿಸುವ ಶಕ್ತಿ ಕರ್ನಾಟಕ ರಕ್ಷಣಾ ವೇದಿಕೆಗೆ ಇದೆ’ ಎಂದರು.

ADVERTISEMENT

‘ಎಂದೂ ಯಾರ ಮನಸ್ಸನ್ನೂ ನೋಯಿಸುವಂತೆ ಮಾತನಾಡದ ಹಂಪನಾ ಅವರು ಮಂಡ್ಯ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ರೈತರ ಪರವಾಗಿ ಮಾತನಾಡಿದ್ದೇ ತಪ್ಪಾಗಿಹೋಯಿತೇ’ ಎಂದು ಪ್ರಶ್ನಿಸಿದರು. ’ತಮ್ಮ ಪಾಡಿಗೆ ಸಾಹಿತ್ಯ-ಸಂಶೋಧನೆಯಲ್ಲಿ ತೊಡಗಿರುವ ಹಂಪನಾ ಅವರೂ ಸರ್ಕಾರವನ್ನು ಟೀಕಿಸಿ ಮಾತನಾಡಿದ್ದಾರೆಂದರೆ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಸರ್ಕಾರ ಮನಗಾಣಬೇಕಿತ್ತು’ ಎಂದು ಹೇಳಿದರು.

ಚಿಂತಕ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕನ್ನಡ ಅಸ್ಮಿತೆಯ ಮೇಲೆ ದಾಳಿಗಳು ಹೆಚ್ಚಾಗುತ್ತಲೇ ಇವೆ. ಇದರ ಮೂಲ ನಾಗಪುರದಲ್ಲಿದೆ. ಅಲ್ಲಿ ಹುಟ್ಟುವ ಅಜೆಂಡಾಗಳನ್ನು ಕರ್ನಾಟಕದ ಮೇಲೆ ಜಾರಿ‌ ಮಾಡಲಾಗುತ್ತಿದೆ. ತಮಿಳುನಾಡು, ಕೇರಳದಲ್ಲಿ ಅವರಿಗೆ ಸಾಧ್ಯವಾಗದೇ ಇರುವುದು ಕರ್ನಾಟಕದಲ್ಲಿ ಸಾಧ್ಯವಾಗಿದೆ. ನಾವು ಎಚ್ಚೆತ್ತುಕೊಳ್ಳಬೇಕಿದೆ’ ಎಂದು ಹೇಳಿದರು.

ಚಿಂತಕರಾದ ನಾಗೇಗೌಡ ಕೀಲಾರ ಶಿವಲಿಂಗಯ್ಯ, ಸಿ.ಜಿ.ಲಕ್ಷ್ಮಿಪತಿ, ಬಿ.ಟಿ.ಲಲಿತಾ ನಾಯಕ್, ಎಲ್.ಎನ್.ಮುಕುಂದರಾಜ್, ಬಿ‌.ಸುರೇಶ್, ಬೆಳಗೂರು ಸಮೀಯುಲ್ಲಾ, ಹುಲಿಕುಂಟೆ ಮೂರ್ತಿ, ಗಿರೀಶ್ ಹಂದಲಗೆರೆ ಹಾಗೂ ಹಲವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.