ADVERTISEMENT

ದೇಶದ ಸರ್ವತೋಮುಖ ಅಭಿವೃದ್ದಿಗೆ ಮೋದಿ ಅವಿರತ ಯತ್ನ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 11:08 IST
Last Updated 12 ಅಕ್ಟೋಬರ್ 2025, 11:08 IST
   

ಬೆಂಗಳೂರು: ‘ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿರುವ 11 ವರ್ಷ ಅವಧಿಯಲ್ಲಿ ದೇಶದ ಸರ್ವತೋಮುಖ ಅಭಿವೃದ್ದಿಗೆ ಅವಿರತವಾಗಿ ಶ್ರಮಿಸುತ್ತಿರುವ ನಾಯಕ’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ದೇವಾಂಗ ಸಂಘದಲ್ಲಿ ಕೊಂಡೆವೂರು ಮಠದ ನಿತ್ಯಾನಂದ ಯೋಗಾಶ್ರಮ ಭಾನುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಷ್ಣು ಸಹಸ್ರನಾಮ ಹವನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದ ಅಭಿವೃದ್ದಿಗೆ ಹತ್ತಾರು ಅಭಿವೃದ್ದಿ ಕೊಡುಗೆಗಳನ್ನು ಮೋದಿ ಅವರು ನೀಡಿದ್ದಾರೆ. ಎರಡು ದಿನದ ಹಿಂದೆಯಷ್ಟೇ ದೇಶದ ರೈತಾಪಿ ವರ್ಗದವರಿಗೆ ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ ಮತ್ತು ದ್ವಿದಳ ಧಾನ್ಯ ರಾಷ್ಟ್ರೀಯ ಯೋಜನೆಯಡಿ ಸುಮಾರು ₹ 45 ಸಾವಿರ ಕೋಟಿ ವೆಚ್ಚದ ಯೋಜನೆಗಳನ್ನು ಆರಂಭಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಸದೃಢ ಭಾರತ ಕಟ್ಟುವಲ್ಲಿ ತಮ್ಮದೇ ರೀತಿಯಲ್ಲಿ ಮೋದಿ ಅವರು ಕೆಲಸ ಮಾಡುತ್ತಿದ್ದು, ಅವರಿಗೆ ಒಳ್ಳೆಯ ಆರೋಗ್ಯ ಸಿಗಲಿ ಎಂದು ಜನ ಎಲ್ಲೆಡೆ ಹಾರೈಸುತ್ತಿದ್ದಾರೆ. ನಿತ್ಯಾನಂದ ಯೋಗಾಶ್ರಮವೂ ನಾನಾ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.

ಹಂಪಿ ಹೇಮಕೂಟ ಸಂಸ್ಥಾನದ ದಯಾನಂದಪುರಿ ಸ್ವಾಮೀಜಿ, ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸ್ವಾಮೀಜಿ, ರಾಜ್ಯಸಭಾ ಸದಸ್ಯರಾದ ಜಗ್ಗೇಶ್‌, ನಾರಾಯಣ್‌, ಮಾಜಿ ಸದಸ್ಯ ಕೆ.ಸಿ.ರಾಮಮೂರ್ತಿ, ನಿವೃತ್ತ ಐಪಿಎಸ್‌ ಅಧಿಕಾರಿ ಜಿ.ರಮೇಶ್‌, ಶಂಕರ ಕಣ್ಣಿನ ಆಸ್ಪತ್ರೆಯ ಎಸ್‌.ಗುರುಪ್ರಸಾದ್‌, ಧರ್ಮಪ್ರಸಾದ್‌ ಹಾಜರಿದ್ದರು.

ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ, ಮಂಗಳೂರಿನ ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದಯಾನಂದ ಪೈ ಹಾಗೂ ಸತೀಶ್‌ ಪೈ ಚಾರಿಟಬಲ್‌ ಟ್ರ‌ಸ್ಟ್‌, ಒನ್‌ಸೈಟ್‌ ಎಸ್ಸಿಲೋರ್‌ ಲುಕ್ಷೋಟಿಕಾ ಫೌಂಡೇಷನ್‌ ಸಹಯೋಗದಲ್ಲಿ ನಡೆದ ನೇತ್ರಾ ಚಿಕಿತ್ಸಾ ಶಿಬಿರದಲ್ಲಿ 500 ಮಂದಿಗೆ ತಪಾಸಣೆ ನಡೆಸಿ ಕೆಲವರಿಗೆ ಕನ್ನಡಕ ವಿತರಿಸಲಾಯಿತು. ಮಠದ ಗೋಶಾಲೆಯಲ್ಲಿ ಉತ್ಪಾದಿಸಿರುವ ಸ್ವದೇಶಿ ಸೋಪುಗಳನ್ನು ವಿತರಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.